1 ಕ್ವಿಂಟಾಲ್​ ಕೊಬ್ಬರಿ ಬೆಲೆ 18 ಸಾವಿರ ರೂಪಾಯಿ! ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

dry cocount
Published on

ತುಮಕೂರು: ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಬುಧವಾರ ಬಂಪರ್​ ಬೆಲೆ ಸಿಕ್ಕಿದೆ. ಇ-ಹರಾಜಿನಲ್ಲಿ ಕ್ವಿಂಟಾಲ್​ಗೆ ಕೊಬ್ಬರಿಗೆ ಗರಿಷ್ಠ 18,000 ರೂಪಾಯಿ ಸಿಕ್ಕಿದ್ದು, ದಾಖಲೆ ಬೆಲೆ ಕಂಡು ರೈತರು ಖುಷಿಯಾಗಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಕೊಬ್ಬರಿ ಬೆಲೆ 18 ಸಾವಿರ ರೂ. ಗಡಿ ದಾಟಿತ್ತು. ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೊಬ್ಬರಿ ಬೆಲೆ ಏರಿಕೆಯಾಗಿದೆ. ಬೆಲೆ ಹೆಚ್ಚಾದರೂ ಆವಕ ಹೆಚ್ಚಾಗಿಲ್ಲ. ಬುಧವಾರ ತಿಪಟೂರು ಮಾರುಕಟ್ಟೆಗೆ 1667 ಕ್ವಿಂಟಾಲ್​ ಕೊಬ್ಬರಿ ಮಾತ್ರ ಬಂದಿತ್ತು. ಮಾರುಕಟ್ಟೆಗೆ ಹೆಚ್ಚು ಕೊಬ್ಬರಿ ಬಂದಾಗಲೂ ಇದೇ ಬೆಲೆ ಇರಲಿ ಎಂಬುದು ರೈತರ ಆಶಯ. ಚಳಿ ಹಾಗೂ ಸಂಕ್ರಾಂತಿ ಹಿನ್ನೆಲೆಯಲ್ಲಿ ಮುಂದಿನ ಒಂದೆರಡು ವಾರ ಕೊಬ್ಬರಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಗೆ ಕೇಂದ್ರ ಒಪ್ಪಿಗೆ

ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ)ಯ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಈ ಅನುಮೋದನೆ ಕೊಟ್ಟಿದೆ. 2022ರ ಮಟ್ಟಿಗೆ ಗಾಣದ ಕೊಬ್ಬರಿಯ ಫೇರ್​ ಎವರೇಜ್​ ಕ್ವಾಲಿಟಿ (ಎಫ್ಎಕ್ಯೂ)ಗೆ ಪ್ರತಿ ಕ್ವಿಂಟಾಲ್​ಗೆ 10,590 ರೂಪಾಯಿ ಎಂಎಸ್​ಪಿ ನಿಗದಿ ಮಾಡಲಾಗಿದೆ. 2021ರಲ್ಲಿ ಕೊಬ್ಬರಿ ಕ್ವಿಂಟಾಲ್​ಗೆ 10,335 ರೂಪಾಯಿ ಎಂಎಸ್​ಪಿ ಚಾಲ್ತಿಯಲ್ಲಿದೆ. ಇಡಿ ಕೊಬ್ಬರಿಗೆ 2022ರಲ್ಲಿ ಪ್ರತಿ ಕ್ವಿಂಟಾಲ್​ಗೆ 11,000 ರೂಪಾಯಿ ನಿಗದಿಯಾಗಿದೆ. ಪ್ರಸಕ್ತ ವರ್ಷ ಇದು 10,600 ರೂ. ಇದೆ. ಕೇಂದ್ರ ಸರ್ಕಾರ 2018-19ರ ಮುಂಗಡಪತ್ರದಲ್ಲಿ ಘೋಷಿಸಿದ ಪ್ರಕಾರ ಅಖಿಲ ಭಾರತ ಮಟ್ಟದಲ್ಲಿ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ ಒಂದೂವರೆ ಪಟ್ಟು ಅಧಿಕ ಎಂಎಸ್​ಪಿ ನಿಗದಿ ಮಾಡಬೇಕೆಂಬ ಸೂತ್ರದ ಪ್ರಕಾರವೇ ಈ ಎಂಎಸ್​ಪಿ ಪರಿಷ್ಕರಿಸಲಾಗಿದೆ. ಇದರಂತೆ ಗಾಣದ ಕೊಬ್ಬರಿಗೆ ಶೇಕಡ 51.85 ಮತ್ತು ಇಡಿ ಕೊಬ್ಬರಿಗೆ ಶೇಕಡ 57.73 ಪ್ರತಿಲ ಸಿಗುವುದನ್ನು ಖಾತರಿಪಡಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net