

ಮಂಗಳೂರು: ಬಿಹಾರದ ಪುಲ್ವಾರಿ ಷರೀಫ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು, ಗುರುವಾರ ಬೆಳ್ಳಂಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಎಸ್‌ಡಿಪಿಐ-ಪಿಎಫ್ಐ ಮುಖಂಡ ರಿಯಾಜ್ ಫರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬಂಟ್ವಾಳದ ಬಿಸಿ ರೋಡ್ನಲ್ಲಿರುವ ರಿಯಾಜ್ ಪರಂಗಿಪೇಟೆಯ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ರಿಯಾಜ್ರ ಮೊಬೈಲ್ ಅನ್ನು ವಶಕ್ಕೆ ಪಡೆದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ರಿಯಾಜ್ರನ್ನ ವಿಚಾರಣೆ ಮಾಡುತ್ತಿದ್ದಾರೆ.
ಕಳೆದ ಜು.15 ರಂದು ಬಿಹಾರದಲ್ಲಿ ಅಖ್ತರ್ ಫರ್ವೇಜ್ ಮತ್ತು ಮಹಮದ್ ಜಲಾಲುದ್ದೀನ್ ಎಂಬ ಇಬ್ಬರನ್ನು ಬಿಹಾರ ಎಟಿಎಸ್ನಿಂದ ಬಂಧಿಸಲಾಗಿದೆ. ಇವರಿಬ್ಬರ ಜತೆ ರಿಯಾಜ್ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಮೇರೆಗೆ ಎನ್ಐಎ ದಾಳಿ ಮಾಡಿದೆ.
ರಿಯಾಜ್ ಪರಂಗಿಪೇಟೆಯ ಮನೆ ಮೇಲೆ ಎನ್ಐಎ ದಾಳಿ ಮಾಡಿದ್ದನ್ನು ಖಂಡಿಸಿ ಎಸ್‌ಡಿಪಿಐ-ಪಿಎಫ್ಐ ಕಾರ್ಯಕರ್ತರು 'ಎನ್ಐಎ ಗೋ ಬ್ಯಾಕ್' ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಬಂಟ್ವಾಳ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.