

ಬೆಳಗಾವಿ: ನೂರಾರು ಕನಸಿನೊಂದಿಗೆ ಮೂರು ತಿಂಗಳ ಹಿಂದೆ ಪ್ರಿಯಕರನೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದ 19 ವರ್ಷದ ಯುವತಿ ಗಂಡನ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾಳೆ.
ಬೆಳಗಾವಿ ಶಹಾಪುರದ ಅಲ್ವಾನ್‍ಗಲ್ಲಿ ನಿವಾಸಿ ಜ್ಯೋತಿ(19) ಮೃತ ದುರ್ದೈವಿ. 23 ವಷ್ದ ಲಕ್ಷ್ಮೀಕಾಂತ್ ಯಲ್ಲಾರಿ ಮತ್ತು ಜ್ಯೋತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಜಾತಿ ಬೇರೆಬೇರೆಯಾಗಿದ್ದರೂ, ಮೂರು ತಿಂಗಳ ಹಿಂದೆ ರಿಜಿಸ್ಟ್ರಾರ್ ಮದುವೆಯನ್ನೂ ಮಾಡಿಕೊಂಡು ಒಟ್ಟಿಗೆ ವಾಸಿಸುತ್ತಿದ್ದರು. ಇಂದು (ಶನಿವಾರ) ಬೆಳಗ್ಗೆ ಗಂಡನ ಮನೆಯಲ್ಲೇ ಜ್ಯೋತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಗಂಡ ಪರಾರಿಯಾಗಿದ್ದಾನೆ.
ಮಗಳಿಗೆ ಮದುವೆ ಆದ ದಿನದಿಂದಲೂ ನಿತ್ಯ ಜಾತಿ ನಿಂದನೆ ಮಾಡುತ್ತಿದ್ದರು, ಅಲ್ಲದೆ, ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ಅಳಿಯ ಲಕ್ಷ್ಮೀಕಾಂತ್ ಮತ್ತು ಅವರ ಮನೆಯವರು ಸೇರಿ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಮೃತಳ ಕುಟುಂಬಸ್ಥರ ಆರೋಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಜ್ಯೋತಿ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ಶಹಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನಿಖೆ ಬಳಿಕ ನವವಿವಾಹಿತೆ ಸಾವಿಗೆ ಜಾತಿ ಅಡ್ಡಿಯಾಯ್ತೆ? ಪ್ರಿಯಕರನೇ ತನ್ನ ಪ್ರೇಯಸಿಯನ್ನ ಕೊಲೆ ಮಾಡಿದನೇ ಎಂಬುದಕ್ಕೆ ಉತ್ತರ ಸಿಗಲಿದೆ.