

ಹುಬ್ಬಳ್ಳಿ: ಅವರಿಬ್ಬರೂ ಪರಸ್ಪರ ಪ್ರೀತಿಸಿ ಮದ್ವೆಯಾಗಿತ್ತು. ಮನೆಯವರ ವಿರೋಧದ ನಡುವೆಯೂ ಯುವತಿ ಪ್ರಿಯಕರನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಅತ್ತ ಮಗ-ಸೊಸೆಯನ್ನು ಮನೆ ತುಂಬಿಸಿಕೊಂಡ ಯುವಕನ ಪಾಲಕರು ನಾಳೆ(ಜೂ.26) ಅದ್ದೂರಿಯಾಗಿ ಆರತಕ್ಷತೆ ನೆರವೇರಿಸಲು ಸಿದ್ಧತೆ ಮಾಡಿಕೊಂಡಿತ್ತು. ಅಷ್ಟರಲ್ಲಿ ಯುವತಿಯನ್ನೇ ಕಿಡ್ನ್ಯಾಪ್ ಮಾಡಲಾಗಿದೆ! ಗಂಡನೊಂದಿಗೆ ತನ್ನ ಅಪ್ಪ-ಅಮ್ಮನ ಆಶೀರ್ವಾದ ಪಡೆಯಲೆಂದು ಹೋದ ಯುವತಿಯನ್ನ ಹುಬ್ಬಳ್ಳಿಯ ಕಾರ್ಪೋರೇಟರ್ ಸೇರಿ ಮೂವರು ಅಪಹರಿಸಿದ್ದಾರೆ ಎಂದ ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಶುಕ್ರವಾರ ರಾತ್ರಿ ಯುವಕ ಕೊಟ್ಟ ದೂರಿನ ಮೇರೆಗೆ ಕಾರ್ಪೋರೆಟರ್ ಚೇತನ ಹಿರೇಕೆರೂರ, ಯುವತಿಯ ತಂದೆ ಶಿವು ಹಿರೇಕೆರೂರ ಸೇರಿ ಮೂವರ ವಿರುದ್ಧ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವು ಹಿರೇಕೆರೂರ ಅವರ ಪುತ್ರಿ ಸಹನಾ ಮತ್ತು ನಿಖಿಲ್ ದಾಂಡೇಲಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಸಹನಾಳ ಕುಟುಂಬಸ್ಥರಿಂದ ವಿರೋಧ ಇತ್ತಂತೆ. ಹಾಗಾಗಿ ಮನೆಯವರ ವಿರೋಧದ ನಡುವೆಯೂ ಸಹನಾ ನಾಲ್ಕೈದು ತಿಂಗಳ ಹಿಂದೆಯೇ ಪ್ರಿಯಕರ ನಿಖಿಲ್ ಜತೆ ಮದ್ವೆಯಾಗಿದ್ದಳು.
ಇವರಿಬ್ಬರ ಮದ್ವೆಯನ್ನು ಒಪ್ಪಿಕೊಂಡ ಯುವಕನ ಕುಟುಂಬಸ್ಥರು ನವದಂಪತಿಗಾಗಿ ಭಾನುವಾರ ಆರತಕ್ಷತೆ ಕಾರ್ಯಕ್ರಮ ನಡೆಸಲು ಸಿದ್ಧತೆಯಲ್ಲಿದ್ದರು. ಅತ್ತ ಪೋಷಕರನ್ನು ಭೇಟಿಯಾಗಿ ಆರ್ಶೀವಾದ ಪಡೆಯಲು ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ ಬಳಿಗೆ ಸಹನಾ ಹೋಗಿದ್ದಳು. ಈ ವೇಳೆ ಯುವತಿಯನ್ನು ಸೋದರ ಸಂಬಂಧಿಯಾದ ಕಾರ್ಪೋರೆಟರ್ ಚೇತನ ಹಿರೇಕೆರೂರ, ಆಕೆಯ ತಂದೆ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಸಹನಳಾ ಗಂಡ ದೂರು ನೀಡಿದ್ದಾನೆ.