ಸಿದ್ದುಗೆ ಸಿಕ್ತು ಸೇಫ್​ ಝೋನ್​... ಪದೇಪದೆ ಯತೀಂದ್ರ ಭೇಟಿ, ಸಿದ್ದುಗಾಗಿ ನನ್ನ ಕ್ಷೇತ್ರವನ್ನೇ ಬಿಟ್ಟುಕೊಡ್ತೀನಿ ಎಂದ ಶಾಸಕ

yathindra siddaramaiah
Published on

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ? ಸಿದ್ದರಾಮಯ್ಯರ ಪುತ್ರ ಪದೇಪದೆ ಆ ಕ್ಷೇತ್ರಕ್ಕೆ ಭೇಟಿ ಕೊಡ್ತಿರೋದು ಯಾಕೆ? ಎಂಬ ಪ್ರಶ್ನೆಗಳು ರಾಜ್ಯ ರಾಜಕೀಯದಲ್ಲಿ ಎದ್ದಿವೆ. ಇದೀಗ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಸುದ್ದಿಯಾಗಿದ್ದ ಕೋಲಾರ ಶಾಸಕ ಕೆ.ಶ್ರೀನಿವಾಸ್​ಗೌಡ ಅವರ ಹೇಳಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋತ ಬಳಿಕ, ಅವರಿಗೆ ಪದೇಪದೆ ಸೋಲಿನ ಭೀತಿಯೂ ಕಾಡುತ್ತಿದೆ. ಸಿಎಂ ಅಭ್ಯರ್ಥಿ ರೇಸ್​ನಲ್ಲಿರುವ ಸಿದ್ದರಾಮಯ್ಯಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕ್ಷೇತ್ರ ಆಯ್ಕೆ ಬಹಳ ಮುಖ್ಯ. ಸೇಫ್​ ಝೋನ್​ ಇರುವ ಕ್ಷೇತ್ರ ಆಯ್ಕೆಯತ್ತ ಗಮನಹರಿಸಿದ್ದಾರೆ. ಅದಕ್ಕಾಗಿ ಈಗಾಗಲೇ ಕೊಪ್ಪಳ, ಚಿಕ್ಕನಾಯಕನಹಳ್ಳಿ, ಚಾಮರಾಜಪೇಟೆ, ಕೋಲಾರ, ವರುಣ ಚಾಮುಂಡೇಶ್ವರಿ, ಬಾದಾಮಿ ಸೇರಿದಂತೆ 8 ಕಡೆ ಆಂತರಿಕ ಸರ್ವೇಯನ್ನೂ ಮಾಡಿಸಲಾಗಿದೆಯಂತೆ. ಈ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರ ಸಿದ್ದರಾಮಯ್ಯಗೆ ಸೇಫ್​ ಎಂಬ ವರದಿ ಬಂದಿದೆಯಂತೆ.

ಆ ಕ್ಷೇತ್ರ ಮತ್ತ್ಯಾವುದೂ ಅಲ್ಲ, ಕೋಲಾರ. ಹೌದು, ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಪಾಲಿಗೆ ಗೆಲುವಿನ ಕ್ಷೇತ್ರ ಎನ್ನಲಾಗ್ತಿದೆ. ಈ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಕೋಲಾರ ಶಾಸಕ ಕೆ.ಶ್ರೀನಿವಾಸ್​ ಗೌಡ, 'ನಾನೇ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದೇನೆ. ಕೋಲಾರದಿಂದಲೇ ಸ್ಪರ್ಧಿಸಿ, ನಾನು ನಿಮ್ಮೊಂದಿಗೆ ಇರ್ತೀನಿ ಎಂದು ಹೇಳಿದ್ದೇನೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಬಳಿಯೂ ಈ ಬಗ್ಗೆ ಮಾತಾಡಿದ್ದೇನೆ. ಈ ರಾಜ್ಯಕ್ಕೆ ಮೊದಲ ಸಿಎಂ ಕೆ.ಸಿ.ರೆಡ್ಡಿ ಅವರನ್ನು ಕೊಟ್ಟ ಜಿಲ್ಲೆ ಕೋಲಾರ. ಹಾಗಾಗಿ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ಕೋಲಾರ ಕ್ಷೇತ್ರದವರೇ ಆಯ್ಕೆ ಆಗಬೇಕು ಎಂಬ ಮಹತ್ತರ ಆಸೆ ನನ್ನದು. ಹಾಗಾಗಿ ಸಿದ್ದರಾಮಯ್ಯ ಅವರನ್ನ ನನ್ನ ಕ್ಷೇತ್ರಕ್ಕೆ ಆಹ್ವಾನಿಸಿದ್ದೇನೆ. ಆಯ್ತು ಮುಂದೆ ನೋಡೋಣ ಎಂದಿದ್ದಾರೆ. ಅವರು ನನ್ನ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ನಾನು ಚುನಾವಣೆಗೆ ನಿಲ್ಲಲ್ಲ, ಅವರ ಪರವಾಗಿ ಕೆಲಸ ಮಾಡ್ತೀನಿ. ಅಕ್ಕಪಕ್ಕದ ಕ್ಷೇತ್ರಗಳಿಗೂ ನಾನು ವಲಸೆ ಹೋಗಲ್ಲ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net