

ಬೆಂಗಳೂರು: ನೂರಾರು ಕನಸಿನ ಬುತ್ತಿಯೊಂದಿಗೆ ನಾಲ್ಕು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ ಗಂಡನ ಮನೆಯಲ್ಲೇ ದುರಂತ ಅಂತ್ಯ ಕಂಡ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಬಾಗಲಗುಂಟೆಯ ನಿವಾಸಿ ಶ್ವೇತಾ (28) ಮೃತ ದುರ್ದೈವಿ. ಖಾಸಗಿ ಕಂಪನಿ ಉದ್ಯೋಗಿ ಕೃಷ್ಣಮೂರ್ತಿ ಜತೆ 4 ತಿಂಗಳ ಹಿಂದೆ ಶ್ವೇತಾಳ ಮದುವೆ ಆಗಿತ್ತು. ದಂಪತಿ ಬಾಗಲಗುಂಟೆಯಲ್ಲಿ ವಾಸವಿದ್ದರು.
ಭಾನುವಾರ ಮನೆಯಲ್ಲಿ ರೂಮಿನ ಬಾಗಿಲನ್ನು ಹಾಕಿಕೊಂಡ ಶ್ವೇತಾ ನೇಣಿಗೆ ಕೊರಳೊಡ್ಡಿದ್ದಳು. ಇದನ್ನ ಗಮನಿಸಿದ ಪತಿ ಮತ್ತು ಆತನ ಕುಟುಂಬಸ್ಥರು ಶ್ವೇತಾಳನ್ನು ಕೆಳಗಿಳಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ಆಕೆ ಬದುಕಿರಲಿಲ್ಲ.
ಸಾವಿಗೂ ಮುನ್ನಾ ತಾಯಿಗೆ ಕರೆ ಮಾಡಿದ್ದ ಶ್ವೇತಾ, ಮದುವೆಯಾದಾಗಿಂದ ಒಂದಲ್ಲ ಒಂದು ವಿಚಾರಕ್ಕೆ ಗಂಡ ಗಲಾಟೆ ಮಾಡುತ್ತಾನೆ. ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದಾನೆ ಎಂದು ಹೇಳಿದ್ದಳಂತೆ. ಗಂಡನ ಹಿಂಸೆ ತಾಳಲಾರದೆ ಶ್ವೇತಾ, ತಾಯಿಗೆ ಈ ಹಿಂದೆ ಹಲವು ಬಾರಿ ಕರೆ ಮಾಡಿ ಅಳಲು ತೋಡಿಕೊಂಡಿದ್ದಳಂತೆ.
ಶ್ವೇತಾಳ ವಿವಾಹ ಸಮಯದಲ್ಲಿ ಕೇಳಿದಷ್ಟು ವರದಕ್ಷಿಣೆ ಕೊಡಲಾಗಿತ್ತು. ವಿವಾಹವಾದ ಬಳಿಕವೂ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಗೆ ಕೃಷ್ಣಮೂರ್ತಿ ಕಿರುಕುಳ ಕೊಡುತ್ತಿದ್ದನಂತೆ. ಇದೇ ವಿಚಾರಕ್ಕೆ ಬೇಸತ್ತ ಶ್ವೇತಾ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.