ಸದ್ಯದಲ್ಲೇ ಬೆಂಗಳೂರಿಗೆ ಹೊಸ ರೂಪ; ಡಿಸಿಎಂ ಡಿಕೆಶಿ ಭರವಸೆ,ನೂತನ ಜಲಾಗಾರಕ್ಕೆಶಂಕುಸ್ಥಾಪನೆ

bwssb
Published on

ಬೆಂಗಳೂರು:ಮುಂಬರುವ ಕೆಲವೇ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದ್ದು, ಸ್ವಚ್ಛತಾ ಅಭಿಯಾನದ ಮೂಲಕ ಸ್ವಚ್ಛ ಬೆಂಗಳೂರು ನಿರ್ಮಿಸಲಾಗುವುದು. ಆ ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 4 ಎಂಎಲ್ಡಿ ಸಾಮರ್ಥ್ಯದ ಜಲಾಗಾರಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಗ್ರೇಟರ್ ಬೆಂಗಳೂರು ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುತ್ತಿದೆ. ಸದ್ಯದಲ್ಲೇ ಯೋಜನೆಗೆ ಚಾಲನೆ ದೊರೆಯಲಿದೆ. ನಂತರ ಬೆಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನ ಮಾಡಲಾಗುವುದು. ಸ್ವಚ್ಛ ಬೆಂಗಳೂರು ರೂಪಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತೇವೆ ಎಂದರು.

ಸುಮಾರು 30 ಸಾವಿರ ಮನೆಗಳು, 2.50 ಲಕ್ಷ ಜನರಿಗೆ ನೀರು ಪೂರೈಸುವ ಮಹತ್ವದ ಯೋಜನೆಗೆ ಇದಾಗಿದ್ದು, ಈ ಕ್ಷೇತ್ರದಲ್ಲಿ ರಸ್ತೆಗೆ 130 ಕೋಟಿ, ಮೇಲ್ಸೇತುವೆಗೆ 43 ಕೋಟಿ, 320 ಕೋಟಿ ಇತರೆ ವಾರ್ಡ್ ಅಭಿವೃದ್ಧಿಗೆ, 650 ಕೋಟಿ ವೆಚ್ಚದಲ್ಲಿ ಹೊಸ ಫ್ಲೈಓವರ್ ಹಾಗೂ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ನಿಮ್ಮ ಮನೆಬಾಗಿಲಿಗೆ ಉಚಿತವಾಗಿ ರವಾನಿಸಲಾಗುವುದು ಎಂದು ಡಿಕೆಶಿ ತಿಳಿಸಿದರು.

ಇತ್ತೀಚೆಗೆ ಮನೆಮನೆಗೆ ಕಾವೇರಿ, ಸಂಚಾರಿ ಕಾವೇರಿ ಯೋಜನೆ ಮೂಲಕ 650 ರೂಪಾಯಿಗೆ ಟ್ಯಾಕಂರ್ ನೀರು ಪೂರೈಸಲಾಗುತ್ತಿದೆ. ನಾವು ಅಧಿಕಾರಕ್ಕೆ ಬಂದ ನಂತರ ಕಾವೇರಿ ಐದನೇ ಹಂತದ ಯೋಜನೆ ಜಾರಿ ಮಾಡಲಾಗಿದೆ. ಬೆಂಗಳೂರಿಗೆ ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ನೀಡಲಾಗಿದೆ.

ದೇವರು ವರ ಅಥವಾ ಶಾಪ ಕೊಡುವುದಿಲ್ಲ; ಬದಲಾಗಿ ಅವಕಾಶ ಮಾತ್ರ ಕೊಡುತ್ತಾನೆ. ನಮಗೆ ಅವಕಾಶ ಸಿಕ್ಕಾಗ ಏನು ಮಾಡುತ್ತೇವೆ ಎಂಬುದು ಮುಖ್ಯ. ಶಾಸಕ ಶ್ರೀನಿವಾಸ್ ವಾರಕ್ಕೆ ಮೂರು ಬಾರಿಯಾದರೂ ನಿಮ್ಮ ಕ್ಷೇತ್ರದ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಡಿಕೆಶಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net