ಬೆಂಗಳೂರು: ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಮುಂದಾಗಿದ್ದು, ಈಗಾಗಲೇ ಅಂಕಿ ಅಂಶವನ್ನಾಧರಿಸಿ ಮೀಸಲಾತಿ ಹಂಚಿಕೆಗಾಗಿ ನ್ಯಾ.ನಾಗಮೋಹನ ದಾಸ್ ನೇತೃತ್ವದ ಏಕವ್ಯಕ್ತಿ ಆಯೋಗವನ್ನು ರಚಿಸಿದೆ. ಆಯೋಗದ ವರದಿಯಂತೆ ಎಸ್‌ಸಿ, ಎಸ್‌ಟಿ ಜಾತಿ ಜನಗಣತಿ ಆರಂಭವಾಗಿದ್ದು, ಈ ಜನಗಣತಿಯಲ್ಲಿ ಕೆಲವು ಗೊಂದಲಗಳು ಏರ್ಪಟ್ಟಿದ್ದು ಇದನ್ನು ಪರಿಹರಿಸಿ ನೈಜ ಗಣತಿಯನ್ನು ಮಾಡುವಂತೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು ಒತ್ತಾಯಿಸಿದ್ದಾರೆ.

ಜಾತಿ ಜನಗಣತಿ ಮಾಡುತ್ತಿರುವ ಅಧಿಕಾರಿಗಳು ಕಳೆದ ಐದಾರು ದಿವಸಗಳಿಂದ ಗಣತಿ ಕಾರ್ಯಗಳನ್ನು ಮಾಡುತ್ತಿದ್ದು, ಕೆಲವೆಡೆ ಯಾವುದೋ ಒಂದು ಸ್ಥಳದಲ್ಲಿ ಕುಳಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದರಿಂದ ಭೋವಿ ಸಮುದಾಯದ ಅಂಕಿಅಂಶಗಳು ಸರಿಯಾಗಿ ನಮೂದಾಗುತ್ತಿಲ್ಲ. ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂಬುದು ಜಾತಿ ವಾಚಕವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಮೂಲ ಜಾತಿ ಕಾಲಂ ನಲ್ಲಿ ಉಪಜಾತಿಗಳನ್ನು ನಮೂದಿಸಿ, ಉಪಜಾತಿ ಕಾಲಂ ನಲ್ಲಿ ಮೂಲ ಜಾತಿಯನ್ನು ಸೇರಿಸುತ್ತಿದ್ದಾರೆ. ಪಡಿತರ ಚೀಟಿಯಲ್ಲಿ ಬೋವಿ ಜನಾಂಗವನ್ನು ಕೆಲವು ಕಡೆ ಎಸ್‌ಟಿ ಎಂದು ನಮೂದಿಸಿದ್ದು, ಅದನ್ನು ಆಧರಿಸಿ ಎಸ್‌ಸಿಯಾಗಿರುವ ಬೋವಿ ಅಥವಾ ಒಡ್ಡರ ಜನಾಂಗವನ್ನು ಎಸ್‌ಟಿ ಎಂದು ನಮೂದಿಸಿದರೆ ಒಳಮೀಸಲಾತಿಯ ಸೌಲಭ್ಯದಿಂದ ಸಮುದಾಯ ವಂಚಿತವಾಗಲಿದೆ. ಆದ್ದರಿಂದ ಆಧಾರ್, ವೋಟರ್ ಐಡಿ ಅಥವಾ ಜಾತಿ ಪ್ರಮಾಣ ಪತ್ರವನ್ನ ಆಧರಿಸಿ ಸರಿಯಾಗಿ ನಮೂದಿಸಬೇಕು. ಹಾಗೂ ಮಕ್ಕಳು, ಮನೆಗೆ ಹೊಸದಾಗಿ ಬಂದಿರುವ ಸೊಸೆಯಂದಿರು ಹೆಸರುಗಳನ್ನು ಸೇರಿಸಿ ಕುಟುಂಬ ಸದಸ್ಯರ ಸಂಖ್ಯೆಯನ್ನು ನೈಜವಾಗಿ ನಮೂದಿಸಬೇಕು. ಈ ಎಲ್ಲ ಗೊಂದಲಗಳನ್ನು ಪರಿಹರಿಸಲು ಗಣತಿ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ಸೀತಾರಾಮು ಆಗ್ರಹಿಸಿದ್ದಾರೆ.
ಅರಿವು ವಿದ್ಯಾಭ್ಯಾಸ ಯೋಜನೆಯಡಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ