ಉಪಯೋಗಕ್ಕೆ ಬಾರದ ನೂತನ ಕಟ್ಟಡ

ಉಪಯೋಗಕ್ಕೆ ಬಾರದ ನೂತನ ಕಟ್ಟಡ
Published on

ಬಿ.ಎಲ್.ಲಕ್ಷ್ಮಣ್ ಬೇಲೂರು ಬೇಲೂರು
ವಿವೇಕಾ ಶಾಲಾ ಯೋಜನೆಯಡಿ 2022-2023ನೇ ಸಾಲಿನಲ್ಲಿ ಹಳೆಯದಾದ ಜೂನಿಯರ್ ಕಾಲೇಜು ಕಟ್ಟಡ ತೆರವುಗೊಳಿಸಿ ಅದೇ ಜಾಗದಲ್ಲಿ ನಿರ್ಮಿಸಿದ್ದ ಎರಡು ಹೊಸ ಕೊಠಡಿಗಳು ಉಪಯೋಗಕ್ಕೆ ಬಾರದಂತಾಗಿ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ.

ಪಟ್ಟಣ ಹೃದಯ ಭಾಗದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಹಳೆಯದಾದ ಜೂನಿಯರ್( ಸರ್ಕಾರಿ ಪದವಿ ಪೂರ್ವ)ಕಾಲೇಜು ಕಟ್ಟಡದಲ್ಲಿ ತಾಲೂಕಿನ ಲಕ್ಷಾಂತರ ವಿದ್ಯಾರ್ಥಿಗಳು ಕಲಿತು ವಿವಿಧ ಉನ್ನತ ಹುದ್ದೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನಮಾನಹೊಂದಿದ್ದಾರೆ. 80ವರ್ಷಕ್ಕೂ ಹಳೆಯ ಕಾಲೇಜು ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿ ಅಪಾಯಕ್ಕೆ ಆಹ್ವಾನ ನೀಡುತಿದ್ದ ಹಿನ್ನೆಲೆ, ಹಿಂದಿನ ಶಾಸಕ ಕೆ.ಎಸ್.ಲಿಂಗೇಶ್, ಸ್ಥಳ ಪರಿಶೀಲಿಸಿ ಹಳೆಯ ಕಟ್ಟಡ ತೆರವಿಗೆ ಮುಂದಾಗಿದ್ದರು. ಅಲ್ಲದೆ ಈ ಕಟ್ಟಡದ ಹಿಂಭಾಗದಲ್ಲಿ ಹೊಸದಾಗಿ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗಕ್ಕೆ ಸೇರಿದ ಕಟ್ಟಡ ನಿರ್ಮಿಸಿ ಅನುಕೂಲ ಕಲ್ಪಿಸಿದ್ದರು. ಅಲ್ಲದೆ ಕಟ್ಟಡ ತೆರವುಗೊಳಿಸಿದ್ದ ಜಾಗದಲ್ಲಿ ಸರ್ಕಾರಿ ಹಿರಿಯ ಪೇಟೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕೆಂದು ವಿವೇಕಾ ಶಾಲಾ ಯೋಜನೆಯಡಿ 27ಲಕ್ಷ ರೂ. ಅನುದಾನದಲ್ಲಿ ಎರಡು ಕೊಠಡಿಯುಳ್ಳ ಸುಸಜ್ಜಿತ ಕಟ್ಟಡ ನಿರ್ಮಿಸಲಾಯಿತು.

ಚನ್ನಕೇಶವಸ್ವಾಮಿ ದೇಗುಲ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪೇಟೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಇಲ್ಲಿನ ಕೊಠಡಿಗೆ ಕರೆ ತಂದು ಪಾಠ ಮಾಡಿ ಪುನ: ವಾಪಸ್ ತೆರಳಲು ಶಿಕ್ಷಕರಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದ ಉದ್ಘಾಟನೆಗೊಂಡ ಕಟ್ಟಡ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ.
ರಾತ್ರಿಯಾದೊಡನೆ ಕಟ್ಟಡ ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗುತ್ತಿದೆ. ಅಲ್ಲದೆ ಭಿಕ್ಷುಕರು, ನಿರ್ಗತಿಕರ ಆವಾಸಸ್ಥಾನವಾಗಿ ಮಾರ್ಪಾಡುಹೊಂದಿದೆ. ಕಟ್ಟಡದ ಸುತ್ತ ಗಿಡಗಂಟಿಗಳು ಬೆಳೆದಿದ್ದು, ಅನೈರ್ಮಲ್ಯದಿಂದ ಕೂಡಿದೆ.

ಕಟ್ಟಡವನ್ನು ಜೂನಿಯರ್ ಕಾಲೇಜಿನ ಪ್ರೌಢಶಾಲೆ ಅಥವಾ ಪದವಿ ಪೂರ್ವ ಕಾಲೇಜಿನ ಆಡಳಿತಕ್ಕೆ ಹಸ್ತಾಂತರಿಸಿ, ವಿದ್ಯಾರ್ಥಿಗಳ ಅನೂಕೂಲಕ್ಕೆ ಕಲ್ಪಿಸಿದರೆ, ಸಾರ್ವಜನಿಕರ ಕಟ್ಟಡವಾದರೂ ಬಳಕೆಗೆ ಬರುತ್ತದೆ ಎಂಬೂದು ಸಾರ್ವಜನಿಕರ ಅಭಿಪ್ರಾಯ.

ಶಾಲಾಭಿವೃದ್ಧಿ ಸಮಿತಿ, ಕಾಲೇಜು ಅಭಿವೃದ್ಧಿ ಮಂಡಳಿ ಅಥವಾ ಸರ್ಕಾರಿ ಹಿರಿಯ ಪೇಟೆ ಪ್ರಾಥಮಿಕ ಶಾಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಅನುಪಯುಕ್ತವಾಗಿರುವ ಕಟ್ಟಡ ಬಳಕೆಗೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net