

ಮಂಡ್ಯ: ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿ ಮಂಗಳವಾರ ಮುಂಜಾನೆ ಹೆಣ್ಣು ಶಿಶುವನ್ನು ನಾಯಿಯೊಂದು ಕಚ್ಚಿಕೊಂಡು ಓಡಾಡಿರುವ ದೃಶ್ಯ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಈ ಮಗು ಮಿಮ್ಸ್‌ಗೆ ಸಂಬಂಧಿಸಿದ್ದಲ್ಲ ಎನ್ನುವುದನ್ನು ಅಧಿಕಾರಿಗಳು ಖಚಿತ ಪಡಿಸಿರುವುದರಿಂದ ಹೆತ್ತವರು ಬೇಡೆಂದು ಬೀಸಾಡಿ ಹೋಗಿರುವ ಗುಮಾನಿ ಗಟ್ಟಿಯಾಗಿದೆ.
ಮಿಮ್ಸ್‌ನ 7ನೇ ವಾರ್ಡ್ ಬಳಿ ಹೆಣ್ಣು ಮಗುವನ್ನು ನಾಯಿಯೊಂದು ಕಚ್ಚಿ ತಿನ್ನುತ್ತಿದ್ದನ್ನು ಕಂಡ ಸಾರ್ವಜನಿಕರು ಕೂಡಲೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಬಂದ ಸಿಬ್ಬಂದಿ ನಾಯಿಗಳನ್ನು ಓಡಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ದುರಾದೃಷ್ಟವಶಾತ್ ಮಗು ಬದುಕಿಲ್ಲ. ನಂತರ ಶವಾಗಾರಕ್ಕೆ ರವಾನಿಸಲಾಯಿತು. ಇತ್ತ ಮಾಹಿತಿ ತಿಳಿದು ಅಧಿಕಾರಿಗಳಿಗೂ ಆತಂಕ ಸೃಷ್ಟಿ ಮಾಡಿತ್ತು. ಕೂಡಲೇ ಹೆರಿಗೆ ವಿಭಾಗದವರಿಂದ ಮಾಹಿತಿ ಕಲೆಹಾಕಲಾಗಿದೆ. ಅದರಂತೆ ಆ ಮಗು ಮಿಮ್ಸ್‌ಗೆ ಸಂಬಂಧಿಸಿದಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ. ನಿರ್ದೇಶಕ ಡಾ.ಮಹೇಂದ್ರಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಗು ಎಲ್ಲಿಂದ ಬಂತೆನ್ನುವ ಮಾಹಿತಿ ಕಲೆಹಾಕುವ ಕೆಲಸ ನಡೆಯಿತು. ಅದರಂತೆ ಸೆ.1ರಿಂದ 5ರವರೆಗೆ ನಾಲ್ಕು ನವಜಾತ ಶಿಶು ಮಿಮ್ಸ್‌ನಲ್ಲಿ ಮೃತಪಟ್ಟಿವೆ. ಈ ಪೈಕಿ ಮೂರು ಗಂಡು, ಒಂದು ಹೆಣ್ಣು. ಈ ಹಿನ್ನೆಲೆಯಲ್ಲಿ ಹೆಣ್ಣು ಮಗುವಿಗೆ ಸಂಬಂಧಿಸಿದಂತೆ ಚನ್ನಪಟ್ಟಣ ಮೂಲದ ದಂಪತಿಯಿಂದ ಮಾಹಿತಿ ಪಡೆದಿದ್ದು, ಅವರು ಅಂತ್ಯಸಂಸ್ಕಾರ ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಜತೆಗೆ ಕಳೆದ 24 ಗಂಟೆಯ ಸಿಸಿ ಕ್ಯಾಮರಾ ದೃಶ್ಯಾವಳಿಯ ದಾಖಲೆಯನ್ನೂ ನೀಡಲಾಗಿದೆ ಎಂದು ಮೆಡಿಕಲ್ ಸೂಪರಿಡೆಂಟ್ ಡಾ.ಶ್ರೀಧರ್ 'ವಿಜಯವಾಣಿ'ಗೆ ತಿಳಿಸಿದರು.