ನಾರಾಯಣ ಗುರುಗಳಿಗೆ ಸಿಎಂ ಅಪಮಾನ: ಬೇಸರ ಹೊರ ಹಾಕುತ್ತಲೇ ಎಚ್ಚರಿಕೆ ಸಂದೇಶ ರವಾನಿಸಿದ ಪ್ರಣವಾನಂದ ಸ್ವಾಮೀಜಿ

pranavanda swamji
Published on

ದಾವಣಗೆರೆ: ಶ್ರೀ ನಾರಾಯಣ ಗುರುಗಳ ಜಯಂತಿ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆ ವಿರುದ್ಧ ಡಾ. ಪ್ರಣವಾನಂದ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.

ವಿಶ್ವಕ್ಕೆ ಸಮಾನತೆ ಸಾರಿರುವ ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ದಿನದಂದು ನಾರಾಯಣ ಗುರುಗಳ ಭಾವಚಿತ್ರಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಲಿಲ್ಲ. ವಿಧಾನಸಭೆಯಲ್ಲಿ ಎಲ್ಲ ಶರಣರ ಭಾವಚಿತ್ರಕ್ಕೆ ಅವರ ಜಯಂತಿ ದಿನದಂದು ಪುಷ್ಪ ನಮನ ಸಲ್ಲಿಸಿ ಪೂಜೆ ಸಲ್ಲಿಸುವ ಪದ್ಧತಿ ನಡೆದು ಬಂದಿದೆ. ಆದರೆ, ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ನಡೆಸಬೇಕಿದ್ದ ಬಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಮೂಲಕ ಮುಖ್ಯಮಂತ್ರಿಗಳು ಗುರುಗಳಿಗೆ ಹಾಗೂ ಈಡಿಗ ಬಿಲ್ಲವ ನಾಮಧಾರಿ ಸಮುದಾಯಕ್ಕೆ ಅವಮಾನಿಸಿದ್ದಾರೆ ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿ ಬೇಸರಿಸಿದ್ದಾರೆ.

ಗಣರಾಜ್ಯೋತ್ಸವ ಮೆರವಣಿಗೆಗೆ ನಾರಾಯಣ ಗುರುಗಳ ಟ್ಯಾಬ್ಲೋವನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ಈ ಹಿಂದೆ ಅವಮಾನಿಸಿತ್ತು. ಬಳಿಕ ರಾಜ್ಯದಲ್ಲಿ ನಾರಾಯಣ ಗುರುಗಳ ಪಾಠವನ್ನು ಪಠ್ಯಪುಸ್ತಕದಿಂದ ತೆಗೆಯಲಾಯಿತು. ಇದೀಗ ಸ್ವತಃ ಸಿಎಂ ಅವರೇ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆಯನ್ನೂ ಸಲ್ಲಿಸಲಿಲ್ಲ. ಪದೇಪದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವಮಾನಿಸುತ್ತಲೇ ಬರುತ್ತಿವೆ. 70 ಲಕ್ಷ ಜನಸಂಖ್ಯೆ ಇರುವ ಈಡಿಗ ಬಿಲ್ಲವ ನಾಮಧಾರಿ ಸಮುದಾಯಕ್ಕೆ ಸರ್ಕಾರಗಳು ಅಗೌರವ ತೋರಿಸಿರುವುದನ್ನು ಸಮುದಾಯ ಗಂಭೀರವಾಗಿ ಪರಿಗಣಿಸಿದೆ ಎಂದರು ಶ್ರೀಗಳು ಎಚ್ಚರಿಸಿದ್ದಾರೆ. ಇನ್ನು ಸಮುದಾಯ ಜನಪ್ರತಿನಿಧಿಗಳೂ ಈ ಬಗ್ಗೆ ಬಾಯಿಬಿಡುತ್ತಿಲ್ಲ. ಎಲ್ಲರೂ ಚುನಾವಣೆ ವೇಳೆ ತಕ್ಕ ಬೆಲೆ ತೆರಬೇಕಾಗುತ್ತೆ ಎಂದು ಸ್ವಾಮೀಜಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net