

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಗುರುವಾರ ಅರಮನೆ ಅಂಗಳದಲ್ಲಿ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದವು. ಅತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ದಸರಾ ಆನೆಗಳನ್ನು ವೀಕ್ಷಿಸಿ ಅವುಗಳ ಬಳಿ ನಿಂತು ನಿಂತು ಫೋಟೋ ತೆಗೆಸಿಕೊಂಡರು. ಬಳಿಕ ಆನೆಗಳ ಮಜ್ಜನ ನೋಡಿ ಸಂಭ್ರಮಿಸಿದರು. ಚಿಣ್ಣರ ಸಂಭ್ರಮವಂತೂ ಮುಗಿಲು ಮುಟ್ಟಿತ್ತು.
ದಸರಾ ಗಜಪಡೆಗೆ ಗುರುವಾರ ಬೆಳಗ್ಗೆಯೇ ಸ್ನಾನ ಮಾಡಿಸಿ ತಿನ್ನಲು ಬೆಲ್ಲ, ಕುಸುರೆ, ಸೊಪ್ಪು, ಬೇಯಿಸಿದ ಧಾನ್ಯ ನೀಡಲಾಯಿತು. ಅರಮನೆ ಆವರಣದಲ್ಲಿ ತನಗಾಗಿಯೇ ನಿರ್ಮಿಸಿರುವ ಶೆಡ್ನಲ್ಲಿ ಆನೆ ಅಭಿಮನ್ಯು ವಿಶ್ರಾಂತಿ ಪಡೆಯುತ್ತಿದ್ದರೆ, ಅತ್ತ ಅರ್ಜುನ, ಗೋಪಾಲಸ್ವಾಮಿ ಗಾಂಭೀರ್ಯದಲ್ಲಿ ಮಲಗಿದ್ದವು. ಇನ್ನು ಧನಂಜಯ, ಭೀಮ ಸೇರಿದಂತೆ ಇತರ ಆನೆಗಳು ಜಲ ಮಜ್ಜನದಲ್ಲಿ ಮುಳುಗಿದ್ದವು.
ಇಂದು ಬೀಳ್ಕೊಡುಗೆ: ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಮಾವುತರು ಮತ್ತು ಕಾವಾಡಿಗಳು ಅ. 7ರಂದು ತಮ್ಮ ಕುಟುಂಬ ಹಾಗೂ ಆನೆಗಳೊಂದಿಗೆ ನಾಡಿನಿಂದ ಕಾಡಿನತ್ತ ಪಯಣ ಬೆಳೆಸಲಿದ್ದಾರೆ. 7ರಂದು ಬೆಳಗ್ಗೆ 9.30 ರಿಂದ 10 ಗಂಟೆ ನಡುವೆ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಪೂಜೆ ನಡೆಯಲಿದೆ. ಬಳಿಕ ಲಾರಿಗಳ ಮೂಲಕ ಆನೆಗಳನ್ನು ಕ್ಯಾಂಪ್ಗಳಿಗೆ ಕಳುಹಿಸಲಾಗುತ್ತದೆ. ಜತೆಗೆ, ಆನೆ ಲಕ್ಷ್ಮೀ ಹಾಗೂ ಮರಿ ಆನೆಯನ್ನೂ ಕ್ಯಾಂಪ್ಗೆ ಕಳುಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಮಾವುತ, ಕಾವಾಡಿಗಳ ಜತೆಯಲ್ಲಿ ಬಂದಿರುವ ಅವರ ಕುಟುಂಬದ ಸದಸ್ಯರು ಮರಳಿ ಕಾಡಿಗೆ ತೆರಳಲು ವಸ್ತುಗಳನ್ನು ಕಟ್ಟಿಕೊಳ್ಳುವ, ಬಟ್ಟೆ ಸ್ವಚ್ಛಗೊಳಿಸಿ ಕೊಳ್ಳುವುದರಲ್ಲಿ ಮಗ್ನವಾಗಿದ್ದ ದೃಶ್ಯ ಗುರುವಾರ ಕಂಡು ಬಂತು.
ದಸರಾ ಆನೆಗಳನ್ನು ಅ. 7ರಂದು ಬೀಳ್ಕೊಡಲಾಗುತ್ತದೆ. ಶುಕ್ರವಾರ ಬೆಳಗ್ಗೆ 9.30 ರಿಂದ 10 ರವರೆಗೂ ಪೂಜಾ ಕಾರ್ಯಕ್ರಮ ನಡೆಯಲಿವೆ. ಕತ್ತಲೆ ಆಗುವ ಒಳಗೆ ಆನೆಗಳನ್ನು ಕ್ಯಾಂಪ್ಗಳಿಗೆ ಕಳುಹಿಸುವ ಕೆಲಸ ಮಾಡಲಾಗುತ್ತದೆ. ಲಕ್ಷ್ಮೀ ಆನೆ ಮತ್ತು ಮರಿ ಆನೆ ಚೆನ್ನಾಗಿವೆ. ಶುಕ್ರವಾರ ಲಕ್ಷ್ಮೀ ಆನೆಯನ್ನು ಕ್ಯಾಂಪ್ಗೆ ಕಳುಹಿಸಲಾಗುತ್ತದೆ.
|ಡಾ.ಕರಿಕಾಳನ್ ಡಿಸಿಎಫ್