

ಗದಗ: 'ಮಹಾರಾಷ್ಟ್ರ ರಾಜ್ಯ ಪರಿವಾಹನ, ಜೈ ಮಹಾರಾಷ್ಟ್ರ' ಎಂಬ ಚಿಹ್ನೆ ಮುದ್ರಿತ ಟಿಕೆಟ್ ಅನ್ನು ಪ್ರಯಾಣಿಕರಿಗೆ ವಿತರಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ಘಟಕದ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.
ವಿಜಯದಶಮಿ ಹಬ್ಬದ ದಿನದಂದು(ಬುಧವಾರ) ಗದಗ ಘಟಕದ ಟಿಕೆಟ್ನಲ್ಲಿ ಈ ಅವಾಂತರವಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮುಂಡರಗಿ ತಾಲೂಕಿನ ಡೋಣಿ ಗ್ರಾಮದಿಂದ ಗದಗ ನಗರಕ್ಕೆ ಬುಧವಾರ ಬರುತ್ತಿದ್ದ ವಾಯವ್ಯ ಸಾರಿಗೆ ಬಸ್ನಲ್ಲಿ ಪ್ರಯಾಣಿಕರಿಗೆ 'ಜೈ ಮಹಾರಾಷ್ಟ್ರ' ಎಂದು ಮುದ್ರಿಸಿರುವ ಟಕೆಟ್ ವಿತರಿಸಲಾಗಿದೆ. ಟಿಕೆಟ್ನ ಮಧ್ಯಭಾಗದಲ್ಲಿ ಕರ್ನಾಟಕದ ಹೆಸರು ಮತ್ತು ಕೆಎಸ್ಆರ್ಟಿಸಿ ಚಿಹ್ನೆಯನ್ನು ಮುದ್ರಿಸುವ ಸ್ಥಳದಲ್ಲಿ 'ಜೈ ಮಹಾರಾಷ್ಟ್ರ' ಎಂದಿದೆ. ಈ ಟಿಕೆಟ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸಾರಿಗೆ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕನ್ನಡ ಪರ ಸಂಟನೆಗಳು ಹಾಗೂ ಜನರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಾರಿಗೆ ಘಟಕದ ಮುಂದೆ ಪ್ರತಿಭಟನೆ ನಡೆಸಿ, ತಪ್ಪಿತಸ್ಥ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆ ನಿಯಂತ್ರಕ ಬಸವರಾಜ, ಕರ್ನಾಟಕ ಹಾಗೂ ಮಹಾರಾಷ್ಟ್ರ ಸಾರಿಗೆ ಇಲಾಖೆಗಳಿಗೆ ಆಂಧ್ರಪ್ರದೇಶದ ಖಾಸಗಿ ಕಂಪನಿಯೊಂದು ಟಿಕೆಟ್ ರೋಲ್ಮುದ್ರಿಸಿ ಪೂರೈಸುತ್ತಿದೆ. ಮಹಾರಾಷ್ಟ್ರಕ್ಕೆ ಪೂರೈಕೆ ಆಗಬೇಕಿದ್ದ ಬಾಕ್ಸ್ನಲ್ಲಿ ಒಂದು ಬಾಕ್ಸ್ ಗದಗ ನಗರಕ್ಕೆ ಪೂರೈಕೆಯಾಗಿದೆ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಆದರೆ, ಇದೀಗ ಟಿಕೆಟ್ ಬದಲಿಸಲಾಗಿದೆ ಎಂದಿದ್ದಾರೆ.