

ಮೈಸೂರು: ಮಗನ ಸಾವಿನ ಹಿಂದೆ ಸೊಸೆಯ ಕೈವಾಡ ಇದೆ ಎಂದು ಕುಟುಂಬಸ್ಥರು ಕೊಟ್ಟ ದೂರಿನ ಮೇರೆಗೆ ಹೂತಿಟ್ಟ ಶವ ಹೊರ ತೆಗೆದು ಪರೀಕ್ಷೆ ನಡೆಸಿದ ಘಟನೆ ತಿ.ನರಸೀಪುರ ತಾಲೂಕು ಯಡದೊರೆ ಗ್ರಾಮದಲ್ಲಿ ಸಂಭವಿಸಿದೆ.
ಯಡದೊರೆ ಗ್ರಾಮದ 34 ವರ್ಷದ ವಿನೋದರಾಜು ಫೆ.21ರಂದು ಮೃತಪಟ್ಟಿದ್ದರು. ಗ್ರಾಮ ಹೊರವಲಯದ ಸ್ಮಶಾನದಲ್ಲಿ ಅಂತ್ಯಕ್ರಿಯೆಯೂ ನಡೆದಿತ್ತು. ಇದೀಗ ವಿನೋದ್ರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಸಹೋದರ ರಘು ಮತ್ತು ಪಾಲಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಹಿನ್ನೆಲೆ ಶುಕ್ರವಾರ ತಹಸೀಲ್ದಾರ್ ಬಿ.ಗಿರಿಜಾ, ಪೊಲೀಸರ ಸಮ್ಮುಖದಲ್ಲಿ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮಗನ ಶವದ ಮುಂದೆ ತಾಯಿ ರಾಜಮ್ಮ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಅಣ್ಣನ ಸಾವಿನ ವೇಳೆ ನಮ್ಮ ಕುಟುಂಬಕ್ಕೆ ಅತ್ತಿಗೆ ಯಾವುದೇ ಮಾಹಿತಿ ತಿಳಿಸಿಲ್ಲ. ಅನಾರೋಗ್ಯದ ವಿಚಾರ ತಿಳಿಸದೇ ಇದ್ದದ್ದು ನಮಗೆ ಅನುಮಾನ ಮೂಡಿಸಿದೆ. ಹಾಗಾಗಿ ಅಣ್ಣನ ಸಾವಿನ ಬಗ್ಗೆ ಅನುಮಾನಗೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಅವರ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದೇವೆ ಎಂದು ರಘು ಹೇಳಿದರು.