

ಮೈಸೂರು: ಮೈಸೂರು ಭೂ ಅಕ್ರಮ ತನಿಖೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲೇ ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿದೆ.
ಶಾಸಕ ಸಾ.ರಾ.ಮಹೇಶ್ ಮಾಲೀಕತ್ವದ ಸಾ.ರಾ.ಚೌಲ್ಟ್ರಿ ಸೇರಿದಂತೆ ಕೇರ್ಗಳ್ಳಿ, ಯಡಹಳ್ಳಿ, ಲಿಂಗಾಂಬುದಿಪಾಳ್ಯ, ದಟ್ಟಗಳ್ಳಿಯಲ್ಲಿ ವಿವಿಧ ಸರ್ವೇ ನಂಬರ್ ಜಮೀನುಗಳಲ್ಲಿ ಭೂ ಅಕ್ರಮ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮರು ಸರ್ವೇ ಮಾಡಿ ತನಿಖೆ ನಡೆಸಲು ಭೂಮಾಪನ ಇಲಾಖೆ ಆಯುಕ್ತ ಮನೀಶ್ ಮೌದ್ಗಿಲ್ ಆದೇಶ ಹೊರಡಿಸಿದ್ದರು. ಇದೀಗ ಈ ಆದೇಶವನ್ನ ಹಿಂಪಡೆಯಲಾಗಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲೇ ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿದೆ.
ತನಿಖಾ ತಂಡ ರಚಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿರುವ ಸರ್ಕಾರ, ತುರ್ತಾಗಿ ತನಿಖೆ ನಡೆಸಿ ಮೂರು ವಾರದೊಳಗೆ ವರದಿ ನೀಡಲು ಸೂಚಿಸಿದೆ. ಸರ್ವೇ ಇಲಾಖೆ ಒಂದರಿಂದಲೇ ತನಿಖೆ ನಡೆಸಲು ಸಾಧ್ಯವಿಲ್ಲ. ಸಮಗ್ರ ತನಿಖೆಗೆ ಕಂದಾಯ, ಸರ್ವೇ ಇಲಾಖೆ, ಮೂಡಾದ ಜಂಟಿ ತಂಡದ ಅಗತ್ಯವಿದೆ ಎಂದ ಉಲ್ಲೇಖಿಸಿದೆ. ಹಾಗಾಗಿ ಮನೀಶ್ ಮೌದ್ಗಿಲ್ ಅವರು ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಇದೀಗ ಕಂದಾಯ ಇಲಾಖೆ ಹಿಂಪಡೆದಿದೆ. ಆರ್ಟಿಐ ಕಾರ್ಯಕರ್ತ ಗಂಗರಾಜು ನೀಡಿದ ದೂರು ಉಲ್ಲೇಖಿಸಿ ತನಿಖೆಗೆ ಆದೇಶಿಸಿದೆ.