

ಬೆಂಗಳೂರು: ಇಷ್ಟೊತ್ತಿನಲ್ಲಿ ರಸ್ತೆಯಲ್ಲಿ ಓಡಾಡಬಾರದು ಎಂದು ಗದರಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಕೊಂದಿರುವ ಘಟನೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇರದ್ ರಾಜ್ ಮೃತ. ರಾಜೇಶ್ ಮತ್ತು ಅವನ ಗ್ಯಾಂಗ್ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 14 ರಂದು ರಾತ್ರಿ ಚಿಕ್ಕಪ್ಪ ವಿಜಯ್ ಜತೆ ಇರದ್ ರಾಜ್ ಮನೆಗೆ ಹೋಗುತ್ತಿದ್ದನು. ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಇಬ್ಬರನ್ನು ಅಡ್ಡ ಹಾಕಿದ್ದ ರೌಡಿ ರಾಜೇಶ್ ಮತ್ತು ಗ್ಯಾಂಗ್ ಮಚ್ಚು ಹಿಡಿದು ರಸ್ತೆ ಬದಿ ನಿಂತಿದ್ದರು. ಇಷ್ಟೊತ್ತಿನಲ್ಲಿ ಓಡಾಡುತ್ತಿದೀಯಾ ಎಂದು ರಾಜೇಶ್ ಕೇಳಿದ್ದಾನೆ. ಯಾಕೆ ಇಷ್ಟೊತ್ತಿನಲ್ಲಿ ಓಡಾಡಬಾರದು ಎಂದು ಇರದ್ ರಾಜ್ ಪ್ರಶ್ನೆ ಮಾಡಿದ್ದಾನೆ. ನಂಗೇ ಪ್ರಶ್ನೆ ಮಾಡುತ್ತೀಯಾ ಎಂದು ರೌಡಿ ರಾಜೇಶ್ ಗುಂಪು ಗಲಾಟೆ ಆರಂಭಿಸಿದೆ. ಇರದ್ ರಾಜ್ ತಲೆಗೆ ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಈ ವೇಳೆ ಅಣ್ಣ ಮನೆಗೆ ಹೋಗುತ್ತಿದ್ದೇವೆ ಎಂದ ಚಿಕ್ಕಪ್ಪ ವಿಜಯ್ಗೂ ನನ್ನೇ ಅಣ್ಣ ಎಂದು ಕರೆಯುತ್ತೀಯಾ ಮಚ್ಚಿನಿಂದ ಹೊಡೆದಿದ್ದಾರೆ.
ನಂತರ ಇಬ್ಬರೂ ಮನೆಗೆ ಹೋಗಿದ್ದಾರೆ. ಗಾಯಕ್ಕೆ ಒಬ್ಬರಿಗೊಬ್ಬರು ಪೌಡರ್ ಹಾಕೊಂಡು ಮಲಗಿದ್ದಾರೆ. ಬೆಳಗ್ಗೆ ಇರದ್ ರಾಜ್ ಸಾವನ್ನಪ್ಪಿದ್ದನು. ಮೃತನ ಚಿಕ್ಕಪ್ಪ ವಿಜಯ್ ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಚಹರೆ ಪತ್ತೆ ಹಚ್ಚಿರುವ ಪೊಲೀಸರು, ರಾಜೇಶ್, ಕಾರ್ತಿಕ್, ಜಗದೀಶ್, ಮನೋಜ್ ಎಂಬುವರಿಂದ ನಡೆದಿರುವ ಕೊಲೆ ಎನ್ನಲಾಗಿದೆ.
ಈ ಗ್ಯಾಂಗ್ನಲ್ಲಿ ಒಬ್ಬನಾಗಿದ್ದ ಕಾರ್ತಿಕ್ ನನ್ನ ವಶಕ್ಕೆಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಮೂವರಿಗಾಗಿ ಮುಂದುವರೆದ ಹುಡುಕಾಟ ನಡೆಸುತ್ತಿದ್ದಾರೆ.