

ಹಳ್ಳಹಿಡಿದ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಹಣ ವರ್ಗಾವಣೆ ಪ್ರಕರಣ
ಗಂಗಾಧರ್ ಬೈರಾಪಟ್ಟಣ ರಾಮನಗರ
ಒಂದು ದಶಕದ ಹಿಂದೆ ಜಿಲ್ಲೆಯಲ್ಲಿ ನಡೆದಿದ್ದ ಕೋಟ್ಯಂತರ ರೂ. ಹಗರಣದ ಪ್ರಕರಣ ಸದ್ದಿಲ್ಲದೆ ಹಳ್ಳ ಹಿಡಿದಿದೆ. ಸಿಬಿಐ ತನಿಖೆ ನಡೆಸುತ್ತಿದೆ ಎನ್ನುವ ಮಾಹಿತಿ ಹೊರತಾಗಿ ಇಡೀ ಪ್ರಕರಣ ಏನಾಗಿದೆ ಎನ್ನುವ ಬಗ್ಗೆ ಯಾರಿಗೂ ಅರಿವೇ ಇಲ್ಲದಿರುವುದು ಇಡೀ ಪ್ರಕರಣ ಮುಚ್ಚಿ ಹೋಗಿದೆ ಎನ್ನುವುದಕ್ಕೆ ಸಾಕ್ಷಿ ಆಗಿದೆ.
ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೈಸೂರಿನ ಮುಡಾ ಅಕ್ರಮ ಭಾರಿ ಸದ್ದು ಮಾಡುತ್ತಿದೆ. ಆದರೆ, ರಾಮನಗರ ಜಿಲ್ಲೆಯಲ್ಲಿ ಒಂದು ದಶಕದ ಹಿಂದೆ ಸಂಚಲನ ಉಂಟು ಮಾಡಿದ್ದ ರಾಮನಗರ - ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಬಹುಕೋಟಿ ಹಗರಣದ ತನಿಖೆ ಏನಾಗಿದೆ ಎನ್ನುವ ಮಾಹಿತಿ ಯಾರಿಗೂ ತಿಳಿಯದಿರುವುದು ವಿರ್ಪಯಾಸ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ, ಹಣವನ್ನು ಡ್ರಾ ಮಾಡಿಕೊಂಡಿರುವ ಪ್ರಕರಣದಂತೆ 2013ರ ಸುಮಾರಿಗೆ ರಾಮನಗರದಲ್ಲಿಯೂ ಠೇವಣಿ ಇಟ್ಟ ಹಣಕ್ಕೆ ಹೆಚ್ಚಿನ ಬಡ್ಡಿ ಪಡೆಯುವ ನೆಪದಲ್ಲಿ 16.90 ಕೋಟಿ ರೂ. ವಂಚಿಸಲಾಗಿತ್ತು. ಈ ಸಂಬಂಧ ಅಂದಿನ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ಎಲ್ ವೈಶಾಲಿ ರಾಮನಗರದ ಐಜೂರು ಪೊಲೀಸರಿಗೆ ದೂರು ನೀಡಿ, ರಾಮನಗರ - ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಂತರ ರೂ. ವಂಚನೆ ನಡೆದಿದೆ. ಇದರ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆ ಹೆಚ್ಚುವಂತೆ ಕೋರಿದ್ದರು. ಈ ಸಂಬಂಧ ಆರಂಭಿಕವಾಗಿ ತನಿಖೆ ನಡೆಸಿದ್ದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ, ಪ್ರಾಧಿಕಾರದ ಅಂದಿನ ಆಯುಕ್ತ ಸೇರಿ ಮಂಡ್ಯ ಮೂಲದ ಹಲವರನ್ನು ಬಂಧಿಸಿದ್ದರು.
ರಾಮನಗರದ ವಿಜಯಬ್ಯಾಂಕ್ ಶಾಖೆಯಲ್ಲಿ ಪ್ರಾಧಿಕಾರ ಖಾತೆ ಹೊಂದಿತ್ತು. ಈ ಖಾತೆ ಮೂಲಕವೇ ಮಂಡ್ಯದ ಇಂಡಿಯನ್ ಬ್ಯಾಂಕ್ ಶಾಖೆ ಖಾತೆಗೆ 9.50 ಕೋಟಿ ರೂ. ವರ್ಗಾವಣೆ ಆಗಿದೆ ಎಂದು ಅಂದು ವಿಜಯ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ಮಾಹಿತಿ ನೀಡಿದ್ದರು. ಈ ಹಣ 2012ರ ಫೆ.13ರಿಂದ ಜು.23ರವರೆಗೆ ಒಟ್ಟು ತಲಾ 1 ಕೋಟಿ ರೂ. ಮೊತ್ತದ 9 ಚೆಕ್‌ಗಳು ಮತ್ತು 50 ಲಕ್ಷ ರೂಪಾಯಿಯ ಮತ್ತೊಂದು ಚೆಕ್ ಇಂಡಿಯನ್ ಬ್ಯಾಂಕ್‌ಗೆ ಸಂದಾಯವಾಗಿದೆ ಎಂದು ವಿಜಯ ಬ್ಯಾಂಕ್‌ನ ರಾಮನಗರ ವ್ಯವಸ್ಥಾಪಕರು ತಿಳಿಸಿದ್ದಾರೆ.
ಆದರೆ ಹಣವನ್ನು ಇಂಡಿಯನ್ ಬ್ಯಾಂಕ್‌ನ ಯಾವ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಬ್ಯಾಂಕ್‌ನಿಂದ ಹೊರಬಿದ್ದಿರಲಿಲ್ಲ. ಜತೆಗೆ ಬೆಂಗಳೂರಿನ ಮಲ್ಲೇಶ್ವರಂನ ಐಸಿಐಸಿಐ ಬ್ಯಾಂಕ್ ಶಾಖೆಯಿಂದ 40 ಲಕ್ಷ ರೂ. ಇಂಡಿಯನ್ ಬ್ಯಾಂಕ್‌ಗೆ ವರ್ಗಾವಣೆಗೊಂಡಿದೆ ಎನ್ನುವ ಮಾಹಿತಿಯೂ ಪೊಲೀಸರ ತನಿಖೆಯಿಂದ ಹೊರ ಬಿದ್ದಿತ್ತು. ಇದರ ಮೊತ್ತ ಏರುತ್ತಾ ಹೋಗಿ, 16.90 ಕೋಟಿ ರೂ.ಗೆ ತಲುಪಿತ್ತು.
ಅಂದು ಭಾರಿ ಸಂಚಲವನ್ನೇ ಉಂಟು ಮಾಡಿದ್ದ ಪ್ರಾಧಿಕಾರದ ಬಹುಕೋಟಿ ಹಗರಣ ಇತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿರುವುದು ಯಾರಿಗೂ ತಿಳಿದಿರಲಿಲ್ಲ ಎನ್ನುವ ಜತೆಗೆ ಈಗ ತನಿಖೆ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯೂ ಯಾರಿಗೂ ಇಲ್ಲ ಎನ್ನುವುದು ಸೋಜಿಗದ ಸಂಗತಿ. ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ವರ್ಗಾಯಿಸುವಾಗ ಪ್ರಾಧಿಕಾರದ ಆಯುಕ್ತರು ಯಾವುದೇ ನಿಯಮ ಪಾಲಿಸಿರಲಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿತ್ತು. ಹಣ ವರ್ಗಾವಣೆ ಮಾಡಬೇಕಾದರೆ ನಗರಾಭಿವೃದ್ಧಿ ಇಲಾಖೆ ಅನುಮತಿ ಪಡೆಯಬೇಕು. ಇದಕ್ಕೆ ಸಂಬಂಧಿಸಿದ ಪತ್ರ ಜಿಲ್ಲಾಧಿಕಾರಿಯ ಮೂಲಕವೇ ರವಾನೆಯಾಗಬೇಕು.
ಆದರೆ ಠೇವಣಿ ಹಣ ವರ್ಗಾವಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಂದಿನ ಜಿಲ್ಲಾಧಿಕಾರಿಗಳೇ ತಿಳಿಸಿದ್ದರು. ಕೋಟ್ಯಂತರ ರೂ. ಹಗರಣದ ತನಿಖೆ ಜವಾಬ್ದಾರಿಯನ್ನು ಸಿಬಿಐಗೆ ವಹಿಸಲಾಗಿದೆ. ಆದರೆ ಇಡೀ ಪ್ರಕರಣ ಏನಾಗಿದೆ ಎನ್ನುವ ಮಾಹಿತಿ ದಶಕ ಕಳೆದರೂ ತಿಳಿದಿಲ್ಲ. ಈ ಬಗ್ಗೆ ಈಗ ಹಾಲಿ ಇರುವ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದವರನ್ನು ಕೇಳಿದರೆ ನಮಗೆ ಮಾಹಿತಿ ಇಲ್ಲ ಎನ್ನುವ ಉತ್ತರ ಹೇಳುತ್ತಾರೆ. ಹಗರಣದ ಹಣ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ ತನಿಖೆ ಪೂರ್ಣಗೊಂಡು ಕೋರ್ಟ್ ಅನುಮತಿ ನೀಡದ ಹೊರತು ಹಣವನ್ನು ಪ್ರಾಧಿಕಾರ ವಾಪಾಸ್ ಪಡೆಯುವಂತಿಲ್ಲ ಎನ್ನುವ ಮಾಹಿತಿಯನ್ನಷ್ಟೇ ನೀಡುತ್ತಾರೆ.