ತಾಪಂ ಕಚೇರಿಯಲ್ಲಿ ಗುತ್ತಿಗೆ ನೌಕರ ಆತ್ಮಹತ್ಯೆ! ಮೃತನ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ....

New Project(14)
Published on

ಬಾಗಲಕೋಟೆ: ಮುಧೋಳ ತಾಲೂಕು ಪಂಚಾಯಿತಿ ಕಚೇರಿ ಆವರಣದ ಕೊಠಡಿಯೊಂದರಲ್ಲಿ ಗುತ್ತಿಗೆ ನೌಕರನೊಬ್ಬ ಸೋಮವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಚಿಕ್ಕಹೆಸರೂರ ಗ್ರಾಮದ ಬಸಣ್ಣ ಪಟ್ಟೇದ(42) ಮೃತ ದುರ್ದೈವಿ. ಮುಧೋಳ ನಗರದಲ್ಲಿ ಬಸಣ್ಣ ಪಟ್ಟೇದ ಗುತ್ತಿಗೆ ಆಧಾರದ ಮೇಲೆ ರಾಜೀವ್ ವಸತಿ ನಿಗಮದಲ್ಲಿ ಮನೆಗಳ ಜಿಪಿಎಸ್ ಕಾರ್ಯ ಮಾಡುತ್ತಿದ್ದರು. ಸೋಮವಾರ ರಾತ್ರಿ ತಾಪಂ ಕಚೇರಿಯ ಆವರಣದ ತನ್ನ ಕೊಠಡಿಯಲ್ಲೇ ಬಸಣ್ಣ ನೇಣಿಗೆ ಕೊರಳೊಡ್ಡಿದ್ದಾರೆ.

ಗಂಡನ ಸಾವಿನ ಸುದ್ದಿ ಕೇಳಿ ಕಂಗಾಲಾದ ಪತ್ನಿ, ಹತ್ತು ವರ್ಷದಿಂದ ಮುಧೋಳ ತಾಲೂಕು ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ ಇವರ ಸಾವಿಗೆ ವೇತನ ನೀಡದಿರುವುದೇ ಕಾರಣ ಎಂದು ಆರೋಪಿಸಿದ್ದಾರೆ.

ಏಳು ವರ್ಷದಿಂದ ವೇತನ ಆಗಿರಲಿಲ್ಲ. ಇದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಗಿತ್ತು. ಕೆಲಸ ಖಾಯಂ ಮಾಡಬೇಕು ಎಂದು ಎಷ್ಟೇ ಮನವಿ ಮಾಡಿದರೂ ಆಗಿರಲಿಲ್ಲ. ಸಮಯಕ್ಕೆ ಸರಿಯಾಗಿ ವೇತನ ಆಗದೆ, ಕೆಲಸವೂ ಖಾಯಂ ಆಗದೆ ಜೀವನ ನಡೆಸಲು ಬಸಣ್ಣ ಪಟ್ಟೇದ ಬಳಲುತ್ತಿದ್ದರು ಎಂದು ಪತ್ನಿ ಕವಿತಾ ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net