

ಶಿವಮೊಗ್ಗ: ಹಿಂದು ಕಾರ್ಯಕರ್ತರು ಕೈಗಳಿಗೆ ಬಳೆ ತೊಟ್ಟಿಲ್ಲ. ಜಿಹಾದಿಗಳಿಗೆ ಬೆನ್ನು ತೋರಿಸಿಲ್ಲ. ಎದೆಯೊಡ್ಡಿ ನಿಲ್ಲುವ ಶಕ್ತಿ ನಮಗಿದೆ. ಯಾವುದೇ ಕಾರಣಕ್ಕೂ ಇನ್ಮುಂದೆ ಇನ್ನೊಬ್ಬ ಹಿಂದು ಕಾರ್ಯಕರ್ತನ ನೆತ್ತರು ಮತ್ತೆ ಹರಿಯದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.
ಗೋಪಿ ವೃತ್ತದಲ್ಲಿ ಶುಕ್ರವಾರ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷದ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ, ವಿಚಾರಗಳನ್ನು ಸಂಪೂರ್ಣವಾಗಿ ರಾಷ್ಟ್ರ ಒಪ್ಪಿಕೊಳ್ಳಬೇಕಿದೆ. ಆದರೆ ಅದಕ್ಕಾಗಿ ಅನೇಕ ಹಿಂದುಗಳ ತ್ಯಾಗ ಬಲಿದಾನ ಆಗುತ್ತಿರುವುದು ನಮ್ಮ ದೌರ್ಭಾಗ್ಯವಾಗಿದೆ. ಇನ್ನೆಷ್ಟು ಹಿಂದು ಕಾರ್ಯಕರ್ತರ ಬಲಿ ಆಗಬೇಕಿದೆ ಎಂದು ಪ್ರಶ್ನಿಸಿದರು.
ಈಗಾಗಲೇ ದೇಶ ಮತ್ತು ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದರೂ ಹಿಂದುಗಳಿಗೆ ರಕ್ಷಣೆ ಸಿಗುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಮತೀಯವಾದಿಗಳು ಕ್ಯಾನ್ಸರ್‌ನಂತೆ ಹಬ್ಬಿದ್ದಾರೆ. ಈಗಾಗಲೇ ಮೂರನೇ ಹಂತ ತಲುಪಿದ್ದು ಒಂದೇ ಬಾರಿಗೆ ನಿರ್ಮೂಲನೆ ಮಾಡುವುದಕ್ಕೆ ಸಾಧ್ಯವಿಲ್ಲ. ಹಂತ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದರು.
ರಾಜ್ಯದಲ್ಲೂ ಉತ್ತರ ಪ್ರದೇಶ ಮಾದರಿ ಆಡಳಿತ ಜಾರಿಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಆ ನಿಟ್ಟಿನಲ್ಲೂ ಚರ್ಚೆಗಳು ನಡೆಯುತ್ತಿವೆ. ಆದಷ್ಟು ಬೇಗ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕೊನೆಯಾಗಬೇಕಿದೆ ಎಂದು ಒತ್ತಾಯಿಸಿದರು.