ಆರು ತಿಂಗಳ ಹಿಂದೆಯೇ ಸತ್ತ ವ್ಯಕ್ತಿಗೆ ಇದೀಗ ಕರೊನಾ ಲಸಿಕೆಯ 2ನೇ ಡೋಸ್​ ಕೊಟ್ಟರು!

coronavaccine
Published on

ವಿಟ್ಲ(ದಕ್ಷಿಣ ಕನ್ನಡ): ಆರು ತಿಂಗಳ ಹಿಂದೆಯೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆದರೆ ಇದೀಗ ಆ ವ್ಯಕ್ತಿಗೆ ಕೋವಿಡ್​ ಲಸಿಕೆಯ ಎರಡನೇ ಡೋಸ್​ ನೀಡಲಾಗಿದೆ ಎಂಬ ಎಸ್​ಎಂಎಸ್​ ಬಂದಿದೆ!

ಮಾಣಿ ಸಮೀಪದ ಮಿತ್ತೂರು ಅಕ್ಕರೆ ನಿವಾಸಿ ಹಸೈನಾರ್​ ಎಂಬುವರು 2001ರ ಏ.27 ರಂದು ಮೃತಪಟ್ಟಿದ್ದರು. ಆದರೆ, ಅ.14ರಂದು ಅವರಿಗೆ ಎರಡನೇ ಡೋಸ್​ ನೀಡಲಾಗಿದೆ ಎಂಬ ಎಸ್​ಎಂಎಸ್​ ಮಗನ ಮೊಬೈಲ್​ಗೆ ಬಂದಿದೆ.

'ನನ್ನ ತಂದೆಗೆ ಮಾರ್ಚ್​ 24ರಂದು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆಯ ಪ್ರಥಮ ಡೋಸ್​ ನೀಡಲಾಗಿತ್ತು. ಎರಡನೇ ಡೋಸ್​ ಪಡೆಯುವ ಮೊದಲೇ ನನ್ನ ತಂದೆ ತೀರಿಕೊಂಡಿದ್ದಾರೆ. ಆದರೆ, ಅ.14ರಂದು ನನ್ನ ಮೊಬೈಲ್​ಗೆ ಒಟಿಪಿ ಬಂದಿದ್ದು ಬಳಿಕ ಎಸ್​ಎಂಎಸ್​ ಬಂದಿದೆ. ಅದರಲ್ಲಿ ನನ್ನ ತಂದೆಗೆ ಎರಡನೇ ಡೋಸ್​ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಎಸ್​ಎಂಎಸ್​ ಲಿಂಕ್​ ಓಪನ್​ ಮಾಡಿ ಪಿಡಿಎಫ್​ ಪರಿಶೀಲಿಸಿದಾಗ ಅದರಲ್ಲೂ ಎರಡನೇ ಡೋಸ್​ ನೀಡಿರುವುದನ್ನು ದೃಢಪಡಿಸಿರುವ ಉಲ್ಲೇಖವಿದೆ. 2 ತಿಂಗಳ ಹಿಂದೆ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕರೆ ಬಂದಿತ್ತು. ತಂದೆಗೆ ಎರಡನೇ ಡೋಸ್​ ನೀಡುವಂತೆ ಹೇಳಿದ್ದರು. ತಂದೆಯ ನಿಧನದ ಮಾಹಿತಿ ನೀಡಿದ್ದೆ. ಆದರೂ ಎರಡನೇ ಡೋಸ್​ ನೀಡಿರುವ ಸಂದೇಶ ಬಂದಿದೆ ಎಂದು ಸಾದಿಕ್​ ದೂರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ದೀಪಾ ಪ್ರಭು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net