

ಶಿವಮೊಗ್ಗ: ರಾಜೀನಾಮೆ ಯಾವುದೇ ಸಮಸ್ಯೆಗೆ ಪರಿಹಾರ ಅಲ್ಲ, ಬೆಳ್ಳಾರೆಯ ಪ್ರವಿಣ್ ಹತ್ಯೆ ಬಳಿಕ ಬಿಜೆಪಿ ಪದಾಧಿಕಾರಿಗಳು ರಾಜೀನಾಮೆಗೆ ಮುಂದಾಗಿರುವುದು ಹೇಯ ಕೃತ್ಯ. ನಮ್ಮ ಕಾರ್ಯಕರ್ತರಿಗೆ ಪ್ರಬುದ್ಧತೆ ಕಡಿಮೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಶಿವಮೊಗ್ಗದಲ್ಲಿ ಹರ್ಷ, ಬೆಳ್ಳಾರಿಯಲ್ಲಿ ಪ್ರವೀಣ್ರನ್ನು ಹತ್ಯೆ ಮಾಡುವ ಮೂಲಕ ಮುಸ್ಲಿಮರು ರಾಜ್ಯದಲ್ಲಿ ಜಿಹಾದಿ ಮನಸ್ಥಿತಿಯನ್ನು ಹುಟ್ಟುಹಾಕುತ್ತಿದ್ದಾರೆ. ಅದರ ವಿರುದ್ಧವೇ ನಾವೆಲ್ಲರೂ ಹೋರಾಡಬೇಕಿದೆ. ರಾಜೀನಾಮೆ ಯಾವುದೇ ಸಮಸ್ಯೆಗೆ ಪರಿಹಾರ ಅಲ್ಲ. ಅಧಿಕಾರದಲ್ಲಿದ್ದು ಸರಿಪಡಿಸಬೇಕೋ ವಿನಃ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ಈ ಹಿಂದೆ ಭಾರತೀಯ ಜನಸಂಘದ ನಾಯಕ ಡಾ. ಶ್ಯಾಮಾಪ್ರಸಾದ್ ಮುಖರ್ಜಿ, ದೀನ್ದಯಾಳ ಉಪಾಧ್ಯಾಯ ಅವರನ್ನೇ ಕೊಲೆ ಮಾಡಲಾಯಿತು. ಅವರೆಲ್ಲರೂ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡದೆ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಪ್ರಬುದ್ಧತೆ ಕಡಿಮೆ. ರಾಜೀನಾಮೆ ನೀಡಿರುವ ವಿಚಾರದಲ್ಲಿ ಅವರನ್ನು ಸಮಾಧಾನ ಪಡಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು.
ಕಾನೂನು ಸುವ್ಯವಸ್ಥೆ ಪಾಲನೆಗೆ ಉತ್ತರ ಪ್ರದೇಶ ಮಾದರಿಯಲ್ಲಿ ಆಡಳಿತ ಜಾರಿಗೆ ತರಬೇಕಾ? ಎಂಬ ಚರ್ಚೆ ಆಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಉತ್ತರಪ್ರದೇಶ ಮಾದರಿಯ ಆಡಳಿತವನ್ನು ಅವಶ್ಯಕತೆ ಬಿದ್ದರೆ ತರಲಾಗುವುದು ಎಂದಿದ್ದಾರೆ. ಅಲ್ಲಿಯವರೆಗೆ ಹೋಗುವುದು ಬೇಡ ಎಂಬುದು ನನ್ನ ಭಾವನೆ. ಅದೇ ಬೇಕು ಎಂದು ಬಯಸಿ ಕೊಲೆ ಮಾಡುವ ಪ್ರವೃತ್ತಿಯನ್ನು ಮುಂದುವರಿಸಿದವರು ತಕ್ಕ ಶಿಕ್ಷೆ ಅನುಭವಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.