ಸಂಪಿಗೆ ಕೆರೆಗೆ ಕಾಯಕಲ್ಪ ಮರೀಚಿಕೆ!

sampige
Published on

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ್ಥಾನ ಬೆಟ್ಟವಿನಲ್ಲಿರುವ ಸಂಪಿಗೆ ಕೆರೆಯ ನೀರು ಪೂರ್ತಿ ಊರಿಗೆ ಆಧಾರವಾಗಿದ್ದು, ಕುಡಿಯಲು ಸಹಿತ ದಿನಬಳಕೆಗೆ ಇರುವ ಪ್ರಮುಖ ಜಲಮೂಲವಾಗಿದೆ. ಆದರೆ ಕೆರೆಯು ಸೂಕ್ತ ಕಾಯಕಲ್ಪವಿಲ್ಲದೆ ವ್ಯರ್ಥವಾಗುತ್ತಿದೆ.

ಮಳೆಗಾಲದಲ್ಲಿ ನೀರು ತುಂಬಿ ಹರಿಯುತ್ತಿದ್ದು, ಬೇಸಿಗೆ ಬಂದರೆ ಸಂಪೂರ್ಣ ಬತ್ತಿ ಹೋಗುತ್ತದೆ. ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆದರೆ ನೀರಿನ ಸಂಗ್ರಹಣಾ ಸಾಮರ್ಥ್ಯ ವೃದ್ಧಿಸಿ ಬೇಸಿಗೆಯಲ್ಲೂ ನೀರು ಸಂಗ್ರಹಗೊಳ್ಳುತ್ತದೆ. ಇದರಿಂದ ಸುತ್ತಮುತ್ತಲಿನ ಅಂತರ್ಜಲವೂ ವೃದ್ಧಿಯಾಗುತ್ತದೆ. ಕೆರೆಯ ಹೂಳೆತ್ತುವಂತೆ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಮನವಿ ಮಾಡಿದ್ದು, ಹೆಬ್ರಿ ತಾಲೂಕು ಪಂಚಾಯಿತಿ ವತಿಯಿಂದ ಜಿಲ್ಲಾ ಪಂಚಾಯಿತಿಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹೆಬ್ರಿ ತಾಲೂಕು ಪಂಚಾಯಿತಿಯ ಅಧಿಕಾರಿಗಳು ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಿದ್ದು, ಶೀಘ್ರವೇ ಕೆರೆಯ ಪುನಃ ಬಳಕೆಗೆ ಸಾಧ್ಯವಾಗುವಂತೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪಂಚಾಯಿತಿ ಸಹಿತ ಹಲವೆಡೆ ಬೋರ್‌ವೆಲ್ ಮೂಲಕ ನೀರು ಪಡೆಯಲಾಗುತ್ತಿದ್ದು, ಕೆಲವೆಡೆ ನೀರಿನ ಸಾಗಾಟ ನಡೆಯುತ್ತಿದೆ. ಬೇಸಿಗೆ ಆರಂಭವಾಗುತ್ತಿದ್ದು ಈಗಲೇ ಹಲವೆಡೆ ನೀರಿನ ಅಭಾವ ಕಾಣಲಾರಂಭಿಸಿದೆ. ಶೀಘ್ರವೇ ಕೆರೆಗೆ ಕಾಯಕಲ್ಪ ದೊರೆತರೆ ಕುಚ್ಚೂರು ಭಾಗದಲ್ಲಿ ನೀರಿನ ಕೊರತೆಯನ್ನು ಕೊಂಚವಾದರೂ ನೀಗಿಸಬಹುದು ಎಂದು ಸ್ಥಳೀಯರು ಹೇಳುತ್ತಾರೆ.

ಕಳೆದ ವರ್ಷ ಬಾಧಿಸಿದ್ದ ಜಲಕ್ಷಾಮ

ಕೆಲವು ವರ್ಷಗಳಿಂದ ಕುಚ್ಚೂರು ಗ್ರಾಮ ಪಂಚಾಯಿತಿಯನ್ನು ಪ್ರಮುಖವಾಗಿ ಕಾಡಿದ್ದು ಜಲಕ್ಷಾಮ ಸಮಸ್ಯೆ. ಕೆರೆಕಟ್ಟೆಗಳು ಬರಿದಾಗಿದ್ದು, ಬೋರ್‌ವೆಲ್‌ಗಳೂ ಬತ್ತಿ ಹೋಗಿದ್ದವು. ಖಾಸಗಿಯವರ ನೆರವು ಪಡೆದು ಪ್ರತಿ ಮನೆಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಗ್ರಾಪಂ ವತಿಯಿಂದ ನಡೆದಿತ್ತು.

ಸಂಪಿಗೆ ಕೆರೆಯಲ್ಲಿ ನೀರು ಸಮೃದ್ಧವಾಗಿದೆ. ಅತ್ಯಂತ ಸ್ವಚ್ಛತೆಯಿಂದ ಕೂಡಿದ ನೀರನ್ನು ಜನರು ಕುಡಿಯಲು ಬಳಸಬಹುದು. ಕೆರೆಯ ಹೂಳೆತ್ತಿ, ವಿಸ್ತರಣೆ ಮಾಡಿದಲ್ಲಿ ಊರಿನ ಕೆಲವು ಕಡೆ ಕುಡಿಯುವ ನೀರಿನ ಸರಬರಾಜು ಮಾಡಬಹುದು. ಪಂಚಾಯಿತಿಗಿರುವ ಬಹುದೊಡ್ಡ ಸಮಸ್ಯೆಯನ್ನು ನೀಗಿಸಲು ಈ ಕೆರೆಯು ಸಹಕಾರಿ ಆಗಬಹುದು. ಮುಂದಿನ ದಿನಗಳಲ್ಲಿ ಇದಕ್ಕೆ ಅನುದಾನವನ್ನು ಸಂಬಂಧಪಟ್ಟವರು ಕಲ್ಪಿಸಿ ಊರಿಗೆ ನೀರು ದೊರಕಲು ಸಹಕಾರ ನೀಡಬೇಕು -ಮಹೇಶ್ ಶೆಟ್ಟಿ ಬಾದ್ಲು, ಉಪಾಧ್ಯಕ್ಷರು, ಕುಚ್ಚೂರು ಗ್ರಾಮ ಪಂಚಾಯಿತಿ ಕೆರೆಯನ್ನು ಪರಿಶೀಲಿಸಿದ್ದೇನೆ. ಹೂಳೆತ್ತಿ, ವಿಸ್ತರಣೆ ಮಾಡುವ ಬಗ್ಗೆ ಯೋಜನೆ ರೂಪಿಸಲಾಗುವುದು. ಈ ಕೆರೆಯನ್ನು ಗ್ರಾಮ ಪಂಚಾಯಿತಿ ಬಳಸಿಕೊಂಡರೆ ಅನೇಕ ಜನರಿಗೆ ಕುಡಿಯುವ ನೀರನ್ನು ಒದಗಿಸಬಹುದು. ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುಮೋದನೆಯಾಗುವ ಎಲ್ಲ ಲಕ್ಷಣ ಇದೆ. -ಶಶಿಧರ್ ಕೆಜೆ, ಇಒ, ಹೆಬ್ರಿ ತಾಲೂಕು ಪಂಚಾಯಿತಿ

*ಹೂಳೆತ್ತದೇ ನೀರಿನ ಸಂಗ್ರಹ ಸಾಮರ್ಥ್ಯ ಇಳಿಕೆ *ಖಾಸಗಿ ಬೋರ್‌ವೆಲ್‌ಗಳ ಅವಲಂಬನೆ ಭೀತಿ *ಯೋಜನೆ ರೂಪಿಸುವುದಾಗಿ ಅಧಿಕಾರಿಗಳ ಭರವಸೆ *ಶೀಘ್ರವೇ ಕಾರ್ಯ ನಡೆಸುವಂತೆ ಗ್ರಾಮಸ್ಥರ ಪಟ್ಟು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net