

ಪಾಂಡವಪುರ: ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಗ್ರಾಮದ ಅಲೆಮನೆಯೊಂದರಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ಅಪ್ರಾಪ್ತೆಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉತ್ತರ ಪ್ರದೇಶದ ಸಾಮ್ಲಿ ಜಿಲ್ಲೆಯ ಡುಡಾರ್ ಮೂಲದ ನಿವಾಸಿ ರೇಖಾ (17) ನಾಪತ್ತೆಯಾದವಳು. ಈಕೆ ತಾಲೂಕಿನ ಚಿಕ್ಕಬ್ಯಾಡರಹಳ್ಳಿಯ ಮನು ಎಂಬುವರ ಅಲೆಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ಸಹೋದರನ ಮನೆಗೆ ಮೂರು ತಿಂಗಳ ಹಿಂದೆ ತಾಯಿ ವಿಮಲಾ ಅವರೊಂದಿಗೆ ಬಂದಿದ್ದು, ಅಂದಿನಿಂದಲೂ ಅಣ್ಣನೊಂದಿಗೆ ವಾಸವಿದ್ದಳು. ಸೆ.12 ರಂದು ಸಂಜೆ 5 ಗಂಟೆ ವೇಳೆಯಲ್ಲಿ ಅಲೆಮನೆಯಿಂದ ಕಾಣೆಯಾಗಿದ್ದಾಳೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಗೊತ್ತಿರುವ ಎಲ್ಲ ಕಡೆ ಹುಡುಕಿದರೂ ಆಕೆ ಎಲ್ಲಿಯೂ ಪತ್ತೆಯಾಗಿಲ್ಲ. ಅದೇ ದಿನ ಅಲೆಮನೆಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಎಂಬ ಯುವಕ ಕೂಡ ನಾಪತ್ತೆಯಾಗಿದ್ದು, ಆತನ ಮೇಲೆ ನಮಗೆ ಅನುಮಾನವಿದೆ ಎಂದು ಅಪ್ರಾಪ್ತೆಯ ಅಣ್ಣ ರವೀಂದ್ರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.