

ಬೆಂಗಳೂರು: ರಾಜಕೀಯ ನಾಯಕತ್ವದ ಮೇಲಾಟಕ್ಕೆ ಕಾಂಗ್ರೆಸ್ ಪಾದಯಾತ್ರೆ ಕೈಗೊಂಡಿದೆ. ಜನಹಿತವೇ ಮುಖ್ಯವಾಗಿದ್ದರೆ ಅಧಿಕಾರದಲ್ಲಿದ್ದಾಗ ನಾಲ್ಕು ವರ್ಷಗಳ ಕಾಲ ಕೈಕಟ್ಟಿ ಕುಳಿತುಕೊಳ್ಳುತ್ತಿರಲಿಲ್ಲ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಟೀಕಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಸಚಿವರು, ಮೇಕೆದಾಟು ಯೋಜನೆಗೆ ಬೇಕಾದ ವಿಸ್ತೃತ ಯೋಜನಾ ವರದಿ ತಯಾರಿಸಲು ವಿಳಂಬ ಮಾಡಿತು. ಸಕಾಲಕ್ಕೆ ಈ ಹೊಣೆ ನಿಭಾಯಿಸಿದ್ದರೆ ಈಗ ಪಾದಯಾತ್ರೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ ಎಂದರು.
ಬೀದಿ ರಾಜಕಾರಣ: ಯೂಕ್ರೇನ್ ಯುದ್ಧ ಭೂಮಿಯಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಕರೆತರುವುದಕ್ಕೆ ಸಲಹೆ- ಸೂಚನೆ ನೀಡುವುದನ್ನು ಬಿಟ್ಟು ಕಾಂಗ್ರೆಸ್ನ ಸಿದ್ದರಾಮಯ್ಯ ಅವರಂತಹ ನಾಯಕರು ಬೀದಿಬದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಸುನಿಲ್ ಕುಮಾರ್ ವ್ಯಂಗ್ಯವಾಡಿದರು.
ಅತಂತ್ರರಾಗಿದ್ದ 3,500 ಭಾರತೀಯರನ್ನು ತಾಯ್ನಾಡಿಗೆ ಕರೆ ತಂದಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ. ಈ ಸಂದರ್ಭದಲ್ಲಿ ಭಾರತೀಯರೆಲ್ಲ ಒಗ್ಗಟ್ಟು ಪ್ರದರ್ಶಿಸಬೇಕು. ಇದರಲ್ಲೂ ಪಕ್ಷ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ನಿರೀಕ್ಷೆಗೆ ಸ್ಪಂದನೆ ವಿಶ್ವಾಸ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ 10 ವರ್ಷಗಳ ಅಭಿವೃದ್ಧಿ ದೃಷ್ಟಿಕೋನ ಉಳ್ಖವರಾಗಿದ್ದು, ಶುಕ್ರವಾರ ಮಂಡಿಸಲಿರುವ ಬಜೆಟ್ನಲ್ಲಿ ನಿರೀಕ್ಷೆಗಳಿಗೆ ಸ್ಪಂದಿಸುವ ವಿಶ್ವಾಸವಿದೆ ಎಂದು ಸುನಿಲ್ ಕುಮಾರ್ ಹೇಳಿದರು.
ಕಳೆದ 15 ದಿನಗಳಿಂದ ಇಲಾಖಾವಾರು ಚರ್ಚಿಸಿ, ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಚಿಂತನೆ ನಡೆಸಿದ್ದು, ಉತ್ತಮವಾದ ಬಜೆಟ್ ಕೊಡಲಿದ್ದಾರೆ. ಆಯಾ ಇಲಾಖೆಗಳ ಅಪೇಕ್ಷೆಗೂ ಸ್ಪಂದಿಸುವ ಭರವಸೆಯಿದೆ ಎಂದರು.