

ಬೆಂಗಳೂರು: ಹಾಲಿನ ದರ ಹೆಚ್ಚಿಸುವಂತೆ ಕೋರಿ 14 ಹಾಲು ಉತ್ಪಾದಕರ ಸಹಕಾರ ಸಂಘಗಳು ಪ್ರಸ್ತಾವನೆ ಸಲ್ಲಿಸಿ ಒತ್ತಾಯಿಸಿವೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಸಚಿವರು, ಹೆಚ್ಚಿಸಿದ ಮೊತ್ತವನ್ನು ಹಾಲು ಉತ್ಪಾದಕರಿಗೆ ಹಂಚುತ್ತೇವೆ. ದರ ಏರಿಕೆಗೆ ರೈತರು ಒತ್ತಡ ಹೇರಿರುವ ಕಾರಣ ಈ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಂಘಗಳು ನಿವೇದಿಸಿಕೊಂಡಿದ್ದು, ಸಿಎಂ ಜತೆ ಚರ್ಚಿಸುವೆ ಎಂದರು.
ತಾಂತ್ರಿಕ ಅಡಚಣೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಾಂತ್ರಿಕ ಅಡಚಣೆ ಕಾರಣಗಳನ್ನು ನೀಡಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿಎಂ ಮುಖೇನ ಮನವಿ ಮಾಡಲಾಗಿದೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.
ಸಹಕಾರ ಸಪ್ತಾಹ: ನ.14 ರಿಂದ 20ರವರೆಗೆ ಸಹಕಾರ ಸಪ್ತಾಹ ಆಯೋಜಿಸಿದ್ದು, ಎಲ್ಲ ಜಿಲ್ಲೆಗಳಲ್ಲಿ ಏಳು ದಿನಗಳ ಕಾರ್ಯಕ್ರಮ ನಡೆಯಲಿವೆ. ಈ ಬಾರಿ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳ ಸಹಕಾರ ಧುರೀಣರನ್ನು ಪರಿಗಣಿಸಲಾಗುವುದು. ಜಿಲ್ಲಾಮಟ್ಟದ ಸಹಕಾರ ರತ್ನ ಪ್ರಶಸ್ತಿ ಆಯಾ ಜಿಲ್ಲೆಯಲ್ಲಿ ಘೋಷಣೆಯಾಗಲಿವೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.