ಗ್ರಾಮಗಳ ಸಮಸ್ಯೆ ಅರಿಯುವ ವಿಧಾನ: ಶಾಸಕ ಹರೀಶ್ ಪೂಂಜ ಹೇಳಿಕೆ

Bel_Janaspandana
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಅನೇಕ ಮಂದಿಗೆ ಇಲಾಖೆ ಸುತ್ತಾಟವೇ ಗತಿ ಎಂಬಂತಾಗಿದೆ. ಇದನ್ನು ಸರಿಪಡಿಸುವ ಸಲುವಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ಅಧಿಕಾರಿ ವರ್ಗ ತೆರಳಿ ವಿಲೇವಾರಿ ಮಾಡಬೇಕೆಂಬ ಚಿಂತನೆಯೇ ಜನಸ್ಪಂದನಾ ಸಭೆಯ ಉದ್ದೇಶವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಶನಿವಾರ ನಾರಾವಿಯಲ್ಲಿ ನಾರಾವಿ ಗ್ರಾಪಂ ಮಟ್ಟದ ಜನಸ್ಪಂದನಾ ಸಭೆ ಉದ್ಘಾಟಿಸಿ ಮಾತನಾಡಿ, ಸಮಸ್ಯೆಗಳ ದಾಖಲೀಕರಣ ಮಾಡಿ, ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ವಿಲೇ ಮಾಡುವುದು ಉದ್ದೇಶವಾಗಿದೆ. ಪ್ರತಿ ಪಂಚಾಯಿತಿಯ ಸಮಸ್ಯೆ ಕುರಿತು ಅವಲೋಕಿಸಲಾಗುವುದು.ಅಕ್ರಮ ಸಕ್ರಮ ಅರ್ಜಿಯನ್ನು ತಕ್ಷಣವೇ ವಿಲೇವಾರಿ ಮಾಡುವ ವ್ಯವಸ್ಥೆಯಾಗಲಿದೆ ಎಂದು ತಿಳಿಸಿದರು.

ಸರ್ಕಾರದ ಆ್ಯಪ್‌ನಲ್ಲಿ ಅನೇಕ ದೋಷಗಳಿರುವುದರಿಂದ ಅದರ ಪರಿಷ್ಕರಣೆಗೂ ಮನವಿ ಮಾಡಲಾಗಿದೆ. ನಾರಾವಿ ಗ್ರಾಮದಲ್ಲಿ ಪಶು ಆಸ್ಪತ್ರೆಯಿದೆೆ. 200ರಿಂದ 300 ಮಂದಿ ಹೈನುಗಾರರಿದ್ದಾರೆ. ಆದರೆ ವೈದ್ಯರ ಕೊರತೆಯಿದೆ. ಗ್ರಾಮಸಭೆಯಲ್ಲಿ ನಾಲ್ಕು ವರ್ಷದಿಂದ ಪ್ರಸ್ತಾವನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ. 400 ವೈದ್ಯರ ಹೊರಗುತ್ತಿಗೆ ಪ್ರಕ್ರಿಯೆ ನಡೆಯುತ್ತಿದ್ದು ಅದರಲ್ಲಿ ಒಬ್ಬರನ್ನು ನಾರಾವಿಗೆ ನೇಮಿಸಲಾಗುವುದು ಎಂದರು.

ನಾರಾವಿ ಗ್ರಾಪಂ ಅಧ್ಯಕ್ಷ ರಾಜವರ್ಮ, ಉಪಾಧ್ಯಕ್ಷೆ ಸುಮಿತ್ರಾ, ತಹಸೀಲ್ದಾರ್ ಪೃಥ್ವಿ ಸಾನಿಕಂ, ಸಿಡಿಪಿಒ ಪ್ರಿಯಾ ಆಗ್ನೆಸ್, ಪ್ರಭಾರ ಶಿಕ್ಷಣಾಧಿಕಾರಿ ವೆಂಟೇಶ್ ತುಳುಪುಳೆ, ಕೃಷಿ ಇಲಾಖೆಯ ಚಂದ್ರಶೇಖರ್ ಸಿ.ಎಚ್., ಜೋಸೆಫ್ ಸಹಿತ ಎಲ್ಲ ಇಲಾಖೆ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಸ್ವಾಗತಿಸಿದರು. ಗ್ರಾಪಂ ಸಿಬಂದಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

ಮಲೆಕುಡಿಯರಿಗೆ ಸಿಗದ ಹಕ್ಕುಪತ್ರ

ನೂಜೋಡಿ ಎಂಬಲ್ಲಿ 25 ಮಲೆಕುಡಿಯ ಕುಟುಂಬಗಳಿವೆ. ಅಕ್ರಮ ಸಕ್ರಮ ಅರ್ಜಿ ಸಲ್ಲಿಸಲಾಗಿದೆ. ಅರಣ್ಯ ಇಲಾಖೆ ಕಂದಾಯ, ಕಂದಾಯ ಅರಣ್ಯ ಎಂದು ಬಾಕಿ ಇಟ್ಟಿದೆ. 1998ರಿಂದ ಅರ್ಜಿ ಸಲ್ಲಿಸಲಾಗಿದೆ. 50 ವರ್ಷದ ಹಿಂದೆಯಿಂದ ಬಂದಿದ್ದೇವೆ. ಪರಿಹಾರವೂ ಸಿಕ್ಕಿಲ್ಲ ಎಂದು ಉಮೇಶ್ ಗಮನಸೆಳೆದರು. ಶಾಸಕರು ಪ್ರತಿಕ್ರಿಯಿಸಿ ಸ್ಥಳ ತನಿಖೆ ಮಾಡಿ ವಾಸ್ತವ ಸ್ಥಿತಿ ತಿಳಿಯೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net