ಪಾದಯಾತ್ರೆ ತಡೆಯಲೆಂದೇ ಸರ್ಕಾರ ಕರೊನಾ ಕೇಸ್​ ಹೆಚ್ಚಿಸ್ತಿದೆ, ಲಾಕ್​ಡೌನ್​ಗೂ ಹೆದರಲ್ಲ: ಡಿಕೆಶಿ-ಸಿದ್ದು ಸವಾಲು

dks siddu
Published on

ಮೈಸೂರು: ಕರೊನಾ ಪ್ರಕರಣಗಳನ್ನು ಹೆಚ್ಚಾಗಿ ಸೃಷ್ಟಿಸಿ ಮೇಕೆದಾಟು ಪಾದಯಾತ್ರೆ ತಡೆಯಲು ಯತ್ನಿಸುತ್ತಿದ್ದಾರೆ‌. ಲಾಕ್​ಡೌನ್ ಜಾರಿಯಾದ್ರೂ ಪಾದಯಾತ್ರೆ ಮಾಡುವುದನ್ನ ನಿಲ್ಲಿಸಲ್ಲ ಎಂದು ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಡಿಕೆಶಿ, ಪಾದಯಾತ್ರೆಯನ್ನು ರಾಜಕಾರಣಕ್ಕಾಗಿ ಎಂದು ಬಿಂಬಿಸುತ್ತಿದ್ದಾರೆ. ನಮಗೆ ಅಧಿಕಾರ ಒಂದೇ ಮುಖ್ಯವಲ್ಲ. ನಮಗೆ ಸಾಮಾಜಿಕ ಕಳಕಳಿಯಿದೆ. ಲಾಕ್​ಡೌನ್ ಜಾರಿಗೂ ನಾವು ಹೆದರಲ್ಲ‌. ಪಾದಯಾತ್ರೆ ಮಾಡಿಯೇ ಮಾಡುತ್ತೇವೆ. 1 ಲಕ್ಷ ಮಾಸ್ಕ್‌ಗೆ ಆರ್ಡರ್ ಕೊಟ್ಟಿದ್ದೇನೆ. 00 ವೈದ್ಯರನ್ನು ಒಳಗೊಂಡ ಮೆಡಿಕಲ್ ಟೀಮ್ ಮಾಡಿಕೊಂಡಿದ್ದೇವೆ. ಮುಂಜಾಗ್ರತೆ ವಹಿಸಿಕೊಂಡೇ ಪಾದಯಾತ್ರೆ ಮಾಡುತ್ತೇವೆ ಎಂದರು. ಇದಕ್ಕೆ ಧ್ವನಿ ಗೂಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೋವಿಡ್ ನೆಪ ಹೇಳಿಕೊಂಡು ಮೇಕೆದಾಟು ಪಾದಯಾತ್ರೆ ತಡೆಗಟ್ಟಲು ಸರ್ಕಾರ ಪ್ರಯತ್ನಿಸುವ ಸಾಧ್ಯತೆ ಇದೆ‌. ಆದರೆ, ನಾವು ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡು ಪಾದಯಾತ್ರೆ ಮಾಡುತ್ತೇವೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನಾವಂತೂ ಪಾದಯಾತ್ರೆ ಮಾಡುತ್ತೇವೆ. ಮೇಕೆದಾಟು ಯೋಜನೆ ಸಂಬಂಧ ನಡೆಯುತ್ತಿರುವ ಹೋರಾಟವನ್ನು ಕಾಂಗ್ರೆಸ್ ಪಕ್ಷ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ ಎಂದಿದ್ದಾರೆ.

ಬಿಜೆಪಿಯವರು ಪಾದಯಾತ್ರೆಯನ್ನು ರಾಜಕೀಯ ಗಿಮಿಕ್ ಅಂತ ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರಂತೂ ಹತಾಶರಾಗಿ ಹೇಳಿಕೆ ಕೊಡುತ್ತಿದ್ದಾರೆ. 2013ರಲ್ಲಿ ನಮ್ಮ ಸರ್ಕಾರ ಇತ್ತು. ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದಾಗ 9 ಸಾವಿರ ಕೋಟಿ ರೂ.ಗಳ ಡಿಪಿಆರ್ ಮಾಡಿದ್ದೇವೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ತಡೆಯಾಜ್ಞೆ ನೀಡಿತ್ತು. ಈಗ ಯಾವುದೇ ಸ್ಟೇ ಇಲ್ಲ. ತಮಿಳುನಾಡಿಗೆ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಲು ಸಂವಿಧಾನಿಕವಾಗಿ, ಕಾನೂನಾತ್ಮಕವಾಗಿ ಯಾವುದೇ ಹಕ್ಕು ಇಲ್ಲ. ಕರ್ನಾಟಕ- ತಮಿಳುನಾಡು ನಡುವೆ ವಿವಾದ ಇಲ್ಲ. ಪ್ರತಿ ವರ್ಷ ನಾವು 177 ಟಿಎಂಸಿ ನೀರು ಬಿಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net