ಮೇಕೆದಾಟು ಪಾದಯಾತ್ರೆ ಆರಂಭಿಸಲು ಕಾಂಗ್ರೆಸ್​ ಸಜ್ಜು: ಫೆ.27ರಂದು ರಾಮನಗರದಿಂದ ಹೊರಡಲಿದೆ ಯಾತ್ರೆ

Mekedatu 1
Published on

ಬೆಂಗಳೂರು: ಅರ್ಧಕ್ಕೆ ನಿಲ್ಲಿಸಲಾಗಿದ್ದ ಮೇಕೆದಾಟು ಪಾದಯಾತ್ರೆಯನ್ನ ಮತ್ತೆ ಆರಂಭಿಸಲು ಕಾಂಗ್ರೆಸ್​ ಸಿದ್ಧತೆ ನಡೆಸಿದ್ದು, ಫೆ.27ರಿಂದ ಮೇಕೆದಾಟು ಹೋರಾಟ ಶುರುವಾಗಲಿದೆ.

ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ 2022ರ ಜನವರಿ 9ರಂದು ಕನಕಪುರದ ಸಂಗಮದಿಂದ ಆರಂಭವಾಗಿತ್ತು. 4 ದಿನದ ಪಾದಯಾತ್ರೆ ರಾಮನಗರದವರೆಗೆ ತಲುಪಿತ್ತು. ಕರೊನಾ ಪ್ರಕರಣ ಹೆಚ್ಚಾಗಿದ್ದರಿಂದ 5ನೇ ದಿನಕ್ಕೆ ಪಾದಯಾತ್ರೆಯು ಮೊಟಕುಗೊಂಡಿತ್ತು. ಇದೀಗ ಪುನಃ ಯಾತ್ರೆ ಆರಂಭಿಸಲು ಉದ್ದೇಶಿಸಿದ್ದು, ರಾಮನಗರದಿಂದ ಬಿಡದಿ, ಕೆಂಗೇರಿ ಮಾರ್ಗವಾಗಿ ಮಲ್ಲೇಶ್ವರ ಒಳಗೊಂಡಂತೆ ಮಾರ್ಗವನ್ನು ಅಂತಿಮಗೊಳಿಸಲಾಗುತ್ತಿದೆ.

ಈ ಕುರಿತು ಗುರುವಾರ ಬೆಂಗಳೂರು ವ್ಯಾಪ್ತಿಯ ಶಾಸಕರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆ ನಡೆಸಿ, ಪಾದಯಾತ್ರೆ ಯಶಸ್ಸುಗೊಳಿಸಲು ಎಲ್ಲರ ಸಹಕರ ನೀಡಬೇಕು ಎಂದು ಕೋರಿದ್ದಾರೆ.

ಪಾದಯಾತ್ರೆಗೆ ತಯಾರಿ ನಡೆಸಿದ್ದೇವೆ. ಬಿಜೆಪಿ ಸರ್ಕಾರದಲ್ಲಿ ನಮಗೆ ಯಾತ್ರೆ ಮಾಡಲು ಅವಕಾಶ ಕೊಡುವುದಿಲ್ಲ. ಎರಡು ದಿನಗಳ ಹಿಂದೆ ಮಠದ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಿದ್ದರು. ಆಡಳಿತ ಪಕ್ಷದ ಅನೇಕರು ಸೇರಿದ್ದರು. ಅವರ ಮೇಲೆ ಪ್ರಕರಣ ದಾಖಲಿಸಲಿಲ್ಲ. ನಾವು ಪಾದಯಾತ್ರೆ ಹೊರಡುತ್ತೇವೆಂದ ಕೂಡಲೇ ಇವರಿಗೆ ಕಾನೂನಿನ ನೆನಪಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಫೆ.27ರಂದು ಯಾತ್ರೆ ಆರಂಭಿಸಬೇಕೆಂದಿದ್ದೇವೆ. ಎಲ್ಲ ಶಾಸಕರ ಅಭಿಪ್ರಾಯ ಪಡೆದು, ಯಾತ್ರೆ ಮಾರ್ಗ ಬದಲಾಯಿಸಿ, ಕಡಿಮೆ ಅವಧಿಯಲ್ಲಿ ಮುಕ್ತಾಯಗೊಳಿಸುವ ಚಿಂತನೆ ಇದೆ ಎಂದು ಡಿಕೆಶಿ 'ವಿಜಯವಾಣಿ'ಗೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net