₹2.25 ಕೋಟಿ ವೆಚ್ಚದ ಬೃಹತ್ ರಥ

FotoJet (2)
Published on

ಇಂದು ನಂದಿಯ ಭೋಗನಂದೀಶ್ವರನಿಗೆ ಸಮರ್ಪಣೆ | ಕುಂಭಾಶಿಯ ವಿಶ್ವಕರ್ಮ ಕರಕುಶಲ ಕೇಂದ್ರದಲ್ಲಿ ನಿರ್ಮಾಣ

 ಚಿಕ್ಕಬಳ್ಳಾಪುರ : ಕಾರ್ತಿಕ ಮಾಸದಲ್ಲಿ ತಾಲೂಕಿನ ನಂದಿಯ ಶ್ರೀ ಭೋಗನಂದಿಶ್ವರ ದೇವಸ್ಥಾನಕ್ಕೆ 2.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮರದ 54 ಅಡಿ ಎತ್ತರದ ಬೃಹತ್ ರಥವನ್ನು ಸಮರ್ಪಿಸಲಾಗುತ್ತಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿಯ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ರಥ ನಿರ್ಮಾಣವಾಗಿದೆ. ನ.21ರ ಗುರುವಾರ ವಿಶೇಷ ಪೂಜೆ ಸಲ್ಲಿಸಿ, ರಥವನ್ನು ದೇವಾಲಯಕ್ಕೆ ಸಮರ್ಪಿಸಲಾಗುತ್ತದೆ.

ಕಲಾ ವೈಶಿಷ್ಟ್ಯವುಳ್ಳ 54 ಅಡಿ ಎತ್ತರದ ತೇರು

ಹಲಸಿನ ಮರ, ಅಚ್ಚಿನ ಮರ, ಬೋಗಿ ಹಾಗೂ ಸಾಗುವಾನಿ ಉಪಯೋಗಿಸಿ ನಿರ್ಮಿಸಿದ ನಕ್ಷತ್ರಾಕಾರದ ರಥದಲ್ಲಿ ಹೂವಿನ ಸಾಲು, ಬಳ್ಳಿ ಸಾಲು, ಶಿವನ ಪರಿವಾರ, ಪಾರ್ವತಿ ಕಲ್ಯಾಣ, ಧ್ವಜ ಸಂಹಾರ, ವಷಭ ವಾಹನ, ರಕ್ಷಣಾಮೂರ್ತಿ ಲಿಂಗೋದ್ಭವ ಮೂರ್ತಿ, ದಶಾವಾತಾರ, ಚಕ್ರ, ಪೀಠ, ಗೂಡು, ಕಲಶ ಸೇರಿ ಇತರ ಆಕರ್ಷಕ ಮೂರ್ತಿಗಳನ್ನು ಕೆತ್ತಲಾಗಿದೆ. 8 ಅಡಿ ಎತ್ತರದ ಚಕ್ರವನ್ನು ಬೋಗಿ ಮರದಿಂದ, ಪೀಠವನ್ನು ಹಲಸು ಮರದಿಂದ ನಿರ್ಮಿಸಲಾಗಿದೆ. ನೆಲದಿಂದ ದೇವರು ಕೂರಿಸುವವರೆಗೂ 15 ಅಡಿ ಕಲಾಕುಸರಿಯ ರಥ, ದೇವರನ್ನು ಕೂರಿಸಲು 6 ಅಡಿ ಎತ್ತರದ ಗೂಡು, ಸಣ್ಣ ಗೂಡು ಹಾಗೂ ಕಲಶ ಸೇರಿ ರಥ ಒಟ್ಟು 54 ಅಡಿ ಎತ್ತರವಿದೆ.

173ನೇ ರಥ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ವಾರ್ಗದರ್ಶನ ಮತ್ತು ರಥಶಿಲ್ಪಿ ರಾಜಗೋಪಾಲ ಆಚಾರ್ಯ ನೇತತ್ವದಲ್ಲಿ ನಂದಿ ರಥ ತಯಾರಾಗಿದೆ. ಇವರು ತಯಾರಿಸಿದ 173ನೇ ರಥ ಇದಾಗಿದೆ. ಇದರ ಮುಂಭಾಗ ಮತ್ತು ಹಿಂಭಾಗದಲಿ ್ಲಅತ್ಯಾಧುನಿಕ ತಂತ್ರಜ್ಞಾನದ ಸ್ಟೇರಿಂಗ್ ಅಳವಡಿಸಿದ್ದು ರಥವನ್ನು ಎಳೆಯುವುದು ಸುಲಭವಾಗಲಿದೆ.

ಹುರುಳುಗುರ್ಕಿಯ ದಾನಿಗಳು

ದೇವನಹಳ್ಳಿ ತಾಲೂಕಿನ ಹುರುಳುಗುರ್ಕಿಯ ಮುತ್ತಪ್ಪನವರ ಕುಟುಂಬದ ವೆಂಕಟೇಗೌಡ ಮತ್ತು ಸರಿತಾ ದಂಪತಿ, ಹಾಗೂ ವೆಂಕಟೇಗೌಡರ ಸಹೋದರರು ಶ್ರೀ ಭೋಗನಂದಿಶ್ವರ ದೇವಸ್ಥಾನಕ್ಕೆ ರಥವನ್ನು ಸೇವಾರೂಪದಲ್ಲಿ ನೀಡಿದ್ದಾರೆ.

ಜಾತ್ರೆಯಲ್ಲಿ ಅಪಶಕುನ

2023ರ ಫೆ.19ರಂದು ನಡೆದ ಜಾತ್ರೆ ವೇಳೆ ಭೋಗನಂದೀಶ್ವರನ ಬ್ರಹ್ಮ ರಥದ ಚಕ್ರ ಕಳಚಿದ ಅಪಶಕುನದ ಪ್ರಕರಣದ ನಡೆದಿದ್ದು ಭಕ್ತರಿಗೆ ಬೇಸರ ಮೂಡಿಸಿತ್ತು. ಇದರ ನಡುವೆ ಹಲವು ವರ್ಷಗಳಿಂದ ಮರದ ರಥ ನಿರ್ಮಾಣದ ಕೆಲಸ ಆಮೆಗತಿಯಲ್ಲಿ ಸಾಗಿತ್ತು. ಈಗ ಪೂರ್ಣಗೊಳ್ಳುವುದಕ್ಕೆ ಕಾಲ ಕೂಡಿ ಬಂದಿದೆ. ಮುಂಬರುವ ಮಹಾಶಿವರಾತ್ರಿ ಹಬ್ಬದ ನಂದಿ ಜಾತ್ರೆಯ ಬ್ರಹ್ಮ ರಥೋತ್ಸವದಲ್ಲಿ ಮರದ ರಥವನ್ನು ಬಳಸಲಾಗುತ್ತದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net