

ಬೆಂಗಳೂರು: ಅವರಿಬ್ಬರೂ ಮೃತಪಟ್ಟು 30 ವರ್ಷ ಕಳೆದಿದೆ. ಆದರೀಗ ಆ ಇಬ್ಬರಿಗೂ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನಡೆದಿದೆ!
ಅರೇ ಇದ್ಹೇನಿದು? ಸತ್ತವರಿಗೆ ಮದ್ವೆನಾ? ಅದೂ 30 ವರ್ಷದ ಬಳಿಕ! ಎಂದು ನಿಮಗೆ ಆಶ್ಚರ್ಯ ಆಗುತ್ತಿರಬೇಕು ಅಲ್ಲವೇ.. ನಿಜ ಇಂತಹದ್ದೊಂದು ಮದುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪ್ರೇಮಿಗಳು ಸತ್ತಿದ್ದರೆ ಅವರ ಮೃತದೇಹಕ್ಕೆ ಮದುವೆ ಮಾಡಿ ಅಂತ್ಯ ಸಂಸ್ಕಾರ ಮಾಡಿಸೋದನ್ನ ನೋಡಿದ್ದೇವೆ. ಆದರೆ ಚಿಕ್ಕ ಮಗು ಆಗಿದ್ದಾಗಲೇ ಸತ್ತವರಿಗೆ 30 ವರ್ಷದ ಬಳಿಕ ಮದುವೆ ನಡೆದಿದೆ! ವಿಚಿತ್ರ ಎನಿಸಿದರೂ ಇಂತಹದ್ದೊಂದು ಮದುವೆ ನಡೆದಿದೆ. ಅದೇ ಪ್ರೇತ ಕಲ್ಯಾಣ! ಇದನ್ನು ಪ್ರೇತಗಳ ಮದುವೆ, ಸತ್ತವರ ಮದುವೆ ಎಂತಲೂ ಕರೆಯುತ್ತಾರೆ.
ಈ ಮದುವೆಯಲ್ಲಿ ಪಾಲ್ಗೊಂಡಿದ್ದ ಅನ್ನಿ ಅರುಣ್ ಎಂಬುವವರು ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದು, ಪ್ರೇತಗಳ ಮದುವೆ ಬಗ್ಗೆಯೂ ವಿವರಿಸಿದ್ದಾರೆ. 'ನಾನೂ ಈ ಮದ್ವೆಯಲ್ಲಿ ಪಾಲ್ಗೊಂಡಿದ್ದೆ. ಮೃತ ವ್ಯಕ್ತಿಗಳಿಬ್ಬರೇ ಇಲ್ಲಿ ಗಂಡು-ಹೆಣ್ಣು. ಮದುವೆ ನಿಶ್ಚಿತಾರ್ಥ, ಮೃತ ಗಂಡಿನ ಕುಟುಂಬಸ್ಥರು ಹೆಣ್ಣಿಗೆ ಧಾರಾಸೀರೆ ತಂದದ್ದು, ಮನೆಯಲ್ಲಿ ಎರಡು ಮಣೆಗಳನ್ನು ಹಾಕಿ ಅದರ ಮೇಲೆ ವಧು-ವರರ ಹೊಸ ಬಟ್ಟೆಗಳನ್ನು ಇಟ್ಟು ಮದುವೆಗೆ ಸಿದ್ಧತೆ... ಥೇಟ್ ಬದುಕಿರುವವರ ಮದುವೆ ನಡೆದಂತೆಯೇ ಇಲ್ಲದವರ ಮದುವೆಯೂ ನಡೆಯಿತು. ಮೆರವಣೆಗೆಯೂ ಇತ್ತು. ಜನರಿಗೆ ಮದುವೆ ಊಟವನ್ನೂ ಹಾಕಿಸಲಾಗಿತ್ತು' ಎಂದು ಬರೆದುಕೊಂಡಿರುವ ಅವರು, ಆ ದೃಶ್ಯವನ್ನೂ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಭೂತಾರಧನೆ, ದೈವಾರಾಧನೆ ಬಗ್ಗೆ ಕೇಳಿದ್ದೇವೆ. ಹಾಗೇ ಈ ಭಾಗದಲ್ಲಿ ಪ್ರೇತಗಳ ಮದುವೆ ಕಾರ್ಯಕ್ರಮವೂ ಸಾಮಾನ್ಯ. ಮದುವೆ ಆಗದೆ ಸತ್ತವರು ಅತೃಪ್ತ ಆತ್ಮಗಳಾಗಿ ಅಲೆಯುತ್ತವೆ. ಆ ಮನೆಯ ಮತ್ತೊಬ್ಬ ಸದಸ್ಯರ ಮದುವೆ ವೇಳೆ ಸಮಸ್ಯೆ ತಂದೊಡ್ಡುತ್ತವೆ. ಹಾಗಾಗಿ ಸತ್ತವರಿಗೆ ಮದುವೆ ಮಾಡಿದರೆ ಸಮಸ್ಯೆ ಬರುವುದಿಲ್ಲ ಎಂಬುದು ನಂಬಿಕೆ. ಹಾಗಾಗಿ ಚಿಕ್ಕ ಮಗು ಇದ್ದಾಗಲೇ ಅಂದರೆ 30 ಷರ್ವದ ಹಿಂದೆ ಶೋಭಾ ಮೃತಪಟ್ಟಿದ್ದರು. ಚಂದ್ರಪ್ಪ ಎಂಬುವರೂ ಅದೇ ವಯಸ್ಸಲ್ಲಿ ಮೃತಪಟ್ಟಿದ್ದರು. ಹಾಗಾಗಿ ಎರಡೂ ಕುಟುಂಬಸ್ಥರು ಸತ್ತವರ ಹೆಸರಲ್ಲಿ ಮದುವೆ ಮಾಡಿದ್ದಾರೆ. ಆಷಾಢ ಮಾಸದಲ್ಲಿ ಇಂತಹ ಮದುವೆ ನಡೆಯೋದು ಕಾಮನ್. ಇನ್ನು ಪ್ರೇತದ ಮದ್ವೆಗೆ ಸಂಬಂಧಿಕರಲ್ಲೇ ಅಥವಾ ತಮ್ಮ ಜಾತಿಯಲ್ಲೇ ಹೆಣ್ಣು-ಗಂಡು ಹುಡುಕುವುದು ವಾಡಿಕೆ.