ಬನ್ನಿ.. ಮೇಲುಕೋಟೆ ಚಲುವನಾರಾಯಣಸ್ವಾಮಿ ಮುಂದೆ ಆಣೆ-ಪ್ರಮಾಣ ಮಾಡಿ: ಜೆಡಿಎಸ್​ ಶಾಸಕರಿಗೆ ಸುಮಲತಾ ಸವಾಲು

aumalatha annadani puttaswamy
Published on

ಮಂಡ್ಯ: ಜೆಡಿಎಸ್​ ಶಾಸಕರ ವಿರುದ್ಧ ಇತ್ತೀಚೆಗೆ ಕಮಿಷನ್​ ಆರೋಪ ಮಾಡಿದ್ದ ಸಂಸದೆ ಸುಮಲತಾ ಅಂಬರೀಷ್, ಮತ್ತೆ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನದ ಎದುರು ಪ್ರಮಾಣ ಮಾಡಲು ನಾನು ಸಿದ್ಧ ಎಂದು ಸವಾಲು ಎಸೆದಿದ್ದಾರೆ.

ಸಂಸದೆಯ ಕಮಿಷನ್​ ಆರೋಪಕ್ಕೆ ಸಂಬಂಧಿಸಿದಂತೆ ಮೇಲುಕೋಟೆ ಶಾಸಕ ಸಿ.ಎಸ್​.ಪುಟ್ಟರಾಜು ನನ್ನ ಬಳಿಯೂ ದಾಖಲೆ ಇದ್ದು, ಬಿಡುಗಡೆ ಮಾಡುತ್ತೇನೆಂದಿದ್ದರು. ಅಂತೆಯೇ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲೆಗೆ ಸಂಸದೆ ಕೊಡುಗೆ ಏನೆಂದು ಟೀಕಿಸಿದ್ದರು. ಈ ಹೇಳಿಕೆ ಕುರಿತು ಸುಮಲತಾ ಇಬ್ಬರು ಶಾಸಕರ ವಿರುದ್ಧ ಅದರಲ್ಲಿಯೂ ಸಿಎಸ್ಪಿ ಬಗ್ಗೆ ವ್ಯಂಗ್ಯದ ಜತೆಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿ.ಹೊಸೂರು ಕಾಲನಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ದಾಖಲೆಗಳನ್ನು ಇಟ್ಟುಕೊಂಡು ಮೇಲುಕೋಟೆಗೆ ಬನ್ನಿ. ದಾಖಲೆ ಸಮೇತ ಆಣೆ-ಪ್ರಮಾಣ ಮಾಡೋಣ, ಯಾರು ಏನು ಎಂದು ಗೊತ್ತಾಗುತ್ತದೆ. ಯಾರು ಕಮಿಷನ್​ ತೆಗೆದುಕೊಳ್ಳುತ್ತಾರೆ ಎಂದು ತಿಳಿಯುತ್ತದೆ. ಸುಮ್ಮನೆ ಆರೋಪ ಮಾಡಬಾರದು. ದಾಖಲೆಗಳನ್ನು ತಂದು ಆಣೆ-ಪ್ರಮಾಣ ಮಾಡಿ ಎಂದು ಜೆಡಿಎಸ್​ ಶಾಸಕರಿಗೆ ಸವಾಲು ಎಸೆದರು.

ನನ್ನ ಸಂಸದೆ ಸರ್ಟಿಫಿಕೇಟ್​ ತರುತ್ತೇನೆ. ಅವರು ಅವರ ಎಂಎಲ್​ಎ ಸರ್ಟಿಫಿಕೇಟ್​ ತೆಗೆದುಕೊಂಡು ಮೇಲುಕೋಟೆಗೆ ಬರಲಿ. ಅಲ್ಲಿ ಆಣೆ-ಪ್ರಮಾಣ ಮಾಡಿ ಮಾತನಾಡೋಣ. ಯಾರು ನಿಜ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಾರೆ ಎಂದು ಜನರಿಗೆ ಗೊತ್ತಾಗುತ್ತದೆ. ನಾನು ಏನೂ ಸಾಬೀತು ಮಾಡಲು ಹೋಗುತ್ತಿಲ್ಲ. ಧೈರ್ಯವಿದ್ದರೆ ಮಾಧ್ಯಮಗಳ ಮುಂದೆಯೂ ಬರಲಿ. ದಾಖಲೆಗಳನ್ನು ತರಲು ಕಮಿಷನ್​ ಕೊಟ್ಟಿರುವವರೇ ರೆಡಿ ಇದ್ದಾರೆ. ನಾನೇ ಸುಮ್ಮನೆ ಇರಿ, ಇಲ್ಲ ಅಂದರೆ ನಿಮ್ಮ ಗುತ್ತಿಗೆ ಕೆಲಸ ಹಾಳಾಗುತ್ತೆ ಎಂದು ಹೇಳಿದ್ದೇನೆ. ನಾವು ನಿಮ್ಮ ಬೆಂಬಲಕ್ಕೆ ಬರುತ್ತೇವೆಂದು ಗುತ್ತಿಗೆದಾರರ ಸಂಘ ಹೇಳಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net