ವಾರದ ಬಳಿಕ ಬಯಲಾಯ್ತು ಪತ್ನಿ ಕೊಲೆ ರಹಸ್ಯ! ಮಾಡಬಾರದ್ದು ಮಾಡಿ ನಾಟಕ ಮಾಡ್ತಿದ್ದವ ಕೊನೆಗೂ ಸಿಕ್ಕಿಬಿದ್ದ

murder case
Published on

ಮಳವಳ್ಳಿ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕುಂದೂರು ಬಳಿ ನಡೆದಿದ್ದ ಮಹಿಳೆ ಕೊಲೆಯ ರಹಸ್ಯ ವಾರದ ಬಳಿಕ ಬಯಲಾಗಿದ್ದು, ಪ್ರಕರಣ ತಿರುಚಲು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಪತಿಯನ್ನ ಪೊಲೀಸರು ಬಂಧಿಸಿದ್ದಾರೆ.

ಒಂದೂವರೆ ವರ್ಷದ ಹಿಂದೆ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ಷಡಕ್ಷರಿ ಎಂಬಾತನ ಜತೆ ಮದ್ದೂರಿನ ಬೆಳಕವಾಡಿ ಸಮೀಪ ದ್ಯಾವಪಟ್ಟಣ ಗ್ರಾಮದ ಸಂಧ್ಯಾರ ಮದುವೆ ಆಗಿತ್ತು. ದಾಂಪತ್ಯದಲ್ಲಿ ಬಿರುಕು ಸೃಷ್ಟಿಯಾಗಿ ಇತ್ತೀಚೆಗೆ ಗಂಡ-ಹೆಂಡತಿ ದೂರವಾಗಿದ್ರು. ತವರು ಮನೆ ಸೇರಿದ್ದ ಸಂಧ್ಯಾ, ಕಂಪ್ಯೂಟರ್​ ತರಬೇತಿಗಾಗಿ ಕೆ.ಎಂ.ದೊಡ್ಡಿಯಲ್ಲಿ ತರಬೇತಿ ಕೇಂದ್ರಕ್ಕೆ ಸೇರಿಕೊಂಡಿದ್ದಳು. ನ.16ರಂದು ಕಂಪ್ಯೂಟರ್​ ತರಬೇತಿಗೆಂದು ಹೋದವಳು ಮನೆಗೆ ವಾಪಸ್​ ಬಂದಿಲ್ಲ ಎಂದು ಸಂಧ್ಯಾಳ ಪಾಲಕರು ನ.17 ರಂದು ಬೆಳಕವಾಡಿ ಪೊಲೀಸ್​ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುಟಂಬದ ಮಾಹಿತಿ ಸಂಗ್ರಹಿಸಿ ಸಂಧ್ಯಾಳ ಪತಿ ಷಡಕ್ಷರಿಯನ್ನು ವಿಚಾರಣೆಗೆ ಕರೆ ತರಲೆಂದು ಹಾಗಲಹಳ್ಳಿಗೆ ಹೋದಾಗ ಆತ ವಿಷ ಸೇವಿಸಿ ಮಂಡ್ಯ ಮಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಗೊತ್ತಾಯಿತು. ಬಳಿಕ ಚಿಕಿತ್ಸೆ ಪಡೆದು ಗುಣಮುಖನಾದ ಷಡಕ್ಷರಿಯನ್ನು ನ.20ರಂದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಆರಂಭದಲ್ಲಿ ತನಗೇನು ಗೊತ್ತಿಲ್ಲ ಎನ್ನುತ್ತಿದ್ದ ಹಂತಕ, ಬಳಿಕ ಸಂಧ್ಯಾಳನ್ನು ಕುಂದೂರು ಬಳಿಯ ನಾಲೆಯಲ್ಲಿ ಮುಳುಗಿಸಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನ.21ರಂದು ನಾಲೆ ಬಳಿಗೆ ಪೊಲೀಸರನ್ನು ಕರೆ ತಂದು ಸಂಧ್ಯಾಳ ಮೃತದೇಹವನ್ನು ತೋರಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net