

ಹೊಸೂರು(ತಮಿಳುನಾಡು): ಮಿದುಳು ಜ್ವರಕ್ಕೆ 10 ವರ್ಷದ ಬಾಲಕನೊಬ್ಬ ಬಲಿಯಾಗಿದ್ದು, ಮಗನ ಸಾವಿಂದ ಕಂಗೆಟ್ಟ ಹೆತ್ತವರು ದುರಂತ ಅಂತ್ಯಕಂಡಿದ್ದಾರೆ.
ಇಂತಹ ಮನಕಲಕುವ ಘಟನೆ ತಮಿಳುನಾಡಿನ ಹೊಸೂರು ಸಮೀಪದ ಅಲಸನತಂ ಗ್ರಾಮದಲ್ಲಿ ಸಂಭವಿಸಿದೆ. ಶೇಕ್ ಅಲ್ಲಾವುದ್ದೀನ್ ಮತ್ತು ಭಾಗ್ಯ ಇಬ್ಬರು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ರಾಜಾರಾಮ್ ಎಂಬ ಪುತ್ರನಿದ್ದ. ಇತ್ತೀಚಿಗೆ ಮಗನಿಗೆ ಮಿದುಳು ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸಿದ್ದರಾದರೂ ಮಗ ಬದುಕಲಿಲ್ಲ.
ಪುತ್ರ ಶೋಕದಿಂದ ಕಂಗೆಟ್ಟ ದಂಪತಿ ನ.19ರಂದು(ಶುಕ್ರವಾರ) ವಿಷ ಕುಡಿದು ಸಾವು-ಬದುಕಿನ ನಡುವೆ ಹೊರಾಡುತ್ತಿದ್ದರು. ಇದನ್ನು ಗಮನಿಸಿದ ನೆರೆ-ಹೊರೆಯವರು ತಕ್ಷಣವೇ ದಂಪತಿಯನ್ನು ಹೊಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಿಸಲಿಲ್ಲ. ಹುಡ್ಕೋ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.