

ಮಂಡ್ಯ: ಜೀವನದಿ ಕಾವೇರಿ ನದಿ ಪ್ರವಾಹದಲ್ಲಿ ಸ್ನಾನ ಮಾಡಲು ಹೋಗಿ ಕೊಚ್ಚಿಕೊಂಡು ಹೋಗಿದ್ದ ಬೆಂಗಳೂರು ಯಲಹಂಕ ನಿವಾಸಿ ಅಶೋಕ್(26) ಆರು ದಿನದ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ.
ಜು.13ರಂದು ಶ್ರೀರಂಗಪಟ್ಟಣದ ಗಂಜಾಂ ಸಮೀಪದ ಸಂಗಮ ಬಳಿ ಸ್ನಾನ ಮಾಡಲು ಇಳಿದಾಗ ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದ. ಅಗ್ನಿಶಾಮಕ ಸಿಬ್ಬಂದಿ, ತಾಲೂಕು ಆಡಳಿತ ಹಾಗೂ ಎನ್‌ಡಿಆರ್‌ಎಫ್ ತಂಡ ಆರು ದಿನದಿಂದ ಯುವಕನ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು. ಈ ನಡುವೆ ಜು.20ರಂದು ಕೆಆರ್‌ಎಸ್ ಅಣೆಕಟ್ಟೆಗೆ ಸಿಎಂ ಬಾಗಿನ ಸಲ್ಲಿಸುವ ಹಿನ್ನೆಲೆಯಲ್ಲಿ ಹೊರಹರಿವಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ.
ಪರಿಣಾಮ ಕಾವೇರಿ ನದಿಯಲ್ಲಿ ಪ್ರವಾಹದ ಪ್ರಮಾಣ ಇಳಿಕೆಯಾದ ನಡುವೆ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಸಮೀಪ, 6 ಕಿ.ಮೀ. ದೂರ ಕೊಚ್ಚಿಕೊಂಡು ಹೋಗಿ ಖಾಸಗಿ ವಿದ್ಯುತ್ ಉತ್ಪಾದನಾ ಕಾರ್ಯಗಾರದ ತಡೆಗೋಡೆಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಶವವನ್ನು ಹೊರತೆಗೆದಿದ್ದಾರೆ.