

ಮಂಡ್ಯ: ಹೆರಿಗೆ ನೋವು ಬಂದಿದೆ, ಪ್ಲೀಸ್ ಅಡ್ಮಿಟ್ ಮಾಡಿಕೊಳ್ಳಿ, ತಾಯಿ-ಮಗುವನ್ನ ಬದುಕಿಸಿ ಎಂದು ಕುಟುಂಬಸ್ಥರು ಗೋಗರೆದರೂ ಆಸ್ಪತ್ರೆ ಒಳಗೆ ಕರೆದುಕೊಳ್ಳಲಿಲ್ಲ. ಬಾಗಿಲಲ್ಲೇ 2 ತಾಸಿಂದ ಕಾಯುತ್ತಾ ನಿಂತಿದ್ದ ತುಂಬುಗರ್ಭಿಣಿ ಕಣ್ಣೀರಿಟ್ಟರೂ ದಾಖಲಿಸಿಕೊಳ್ಳಲಿಲ್ಲ. ಆಸ್ಪತ್ರೆ ಬಾಗಿಲಲ್ಲೇ ನಿಂತಲ್ಲೇ ಮಗು ಕೆಳಗೆ ಬಿದ್ದು ಸತ್ತಿದೆ...
ಇಂತಹ ಅಮಾನವೀಯ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಮುಂಭಾಗ ಇಂದು(ಬುಧವಾರ) ಬೆಳಗ್ಗೆ ಸಂಭವಿಸಿದೆ.ನಿನ್ನೆ(ಮಂಗಳವಾರ) ಹೆರಿಗೆಗಾಗಿ ಸೋನು ಎಂಬಾಕೆ ಆಸ್ಪತ್ರೆಗೆ ಬಂದಿದ್ದಳು. ಕೋವಿಡ್ ರಿಪೋರ್ಟ್ ಇಲ್ಲ ಎನ್ನುವ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ಅಡ್ಮಿಟ್ ಮಾಡಿಕೊಂಡಿರಲಿಲ್ಲ. ಇಂದು ಬೆಳಗ್ಗೆ 6 ಗಂಟೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 8ರ ವೇಳೆಗೆ ಆಸ್ಪತ್ರೆಗೆ ಆಕೆಯನ್ನ ಕುಟುಂಬಸ್ಥರು ಕರೆದುಕೊಂಡು ಬಂದಿದ್ದರು.
ಆಸ್ಪತ್ರೆ ಬಾಗಿಲಲ್ಲಿ 2 ಗಂಟೆ ಕಾದರೂ ದಾಖಲು ಮಾಡಿಕೊಂಡಿರಲಿಲ್ಲ. ಈ ವೇಳೆ ಆಸ್ಪತ್ರೆ ಮುಂಭಾಗ ಮಹಿಳೆ ನಿಂತಿದ್ದ ವೇಳೆಯೇ ಹೆರಿಗೆಯಾಗಿದೆ. ಕೆಳಗೆ ಬಿದ್ದ ಮಗು ಸ್ಥಳದಲ್ಲೇ ಸತ್ತಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರ ಆಕ್ರೋಶ ಹೊರಹಾಕಿದ್ದಾರೆ.