

ಬೆಂಗಳೂರು: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟಿಸುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಮಹಿಳಾ ಕಾರ್ಯಕರ್ತೆಯೊಬ್ಬರ ಜತೆ ಮೊಬೈಲ್ನಲ್ಲಿ ಶಿವರಾಮೇಗೌಡ ಮಾತನಾಡುತ್ತಾ, ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ 30 ಕೋಟಿ ರೂ. ಖರ್ಚು ಮಾಡಿದ್ದೆ. ಎಂಎಲ್ಸಿ ಚುನಾವಣೆಯಲ್ಲಿ 27 ಕೋಟಿ ರೂ. ಖರ್ಚು ಮಾಡಿದ್ದೆ. ಮುಂಬರುವ ವಿಧಾನಸಭೆ ಚುನಾವಣೆಗೆ 30 ಕೋಟಿ ರೂ. ಖರ್ಚು ಮಾಡಲು ಸಿದ್ಧನಿದ್ದೇನೆ. ನೀವು ನನಗೇ ಬೆಂಬಲ ನೀಡಬೇಕು ಎಂದಿದ್ದ ಆಡಿಯೋ ವೈರಲ್ ಆಗಿತ್ತು. ಈ ಕುರಿತು ಸೋಮವಾರ ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಇವರೊಬ್ಬರೇ ಹಣ ಕಂಡಿಲ್ಲ. ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ ದಿ.ಮಾದೇಗೌಡರ ವಿಚಾರದಲ್ಲೂ ಶಿವರಾಮೇಗೌಡ ನಾಲಗೆ ಹರಿಯಬಿಟ್ಟಿದ್ದಾರೆ. ಇಂತಹವರು ಪಕ್ಷದಲ್ಲಿದ್ದರೆ ಶೋಭೆ ತರುವುದಿಲ್ಲ. ನೋಟಿಸ್ ಕೊಟ್ಟು ಪಕ್ಷದಿಂದ ಹೊರ ಹಾಕುವಂತೆ ಜೆಡಿಎಸ್ ಅಧ್ಯಕ್ಷರಿಗೆ ಸೂಚನೆ ಕೊಡುವೆ ಎಂದರು.
ಪಾರ್ಲಿಮೆಂಟ್ ಚುನಾವಣೆಯಲ್ಲಿ 30 ಕೋಟಿ ಮಾಡಿದ್ದಾಗಿ ಹೇಳಿದ್ದಾರೆ. ಅದ್ಯಾರಿಗೆ ಹಣ ಕೊಟ್ಟಿದ್ದಾರೋ ಗೊತ್ತಿಲ್ಲ. ಸಂಬಂಧ ಇಲ್ಲದೇ ಇರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ ದಿ.ಮಾದೇಗೌಡರ ವಿಚಾರದಲ್ಲಿ ಮಾತನಾಡಿದ್ದಾರೆ. ನಮಗೆ ಅವರಿಗೆ ರಾಜಕೀಯ ಬೇರೆ. ಅವರು ಈಗ ಇಲ್ಲ. ಇಂತಹ ಸಂದರ್ಭದಲ್ಲಿ ಆ ರೀತಿ ಪದಬಳಕೆ ಮಾಡಿರೋದು ಸರಿಯಲ್ಲ. ಮಾದೇಗೌಡರ ಬಗ್ಗೆ ಶಿವರಾಮೇಗೌಡ ಮಾತನಾಡಿದ್ದು ಸರಿಯಲ್ಲ. ಎಲ್ಲದಕ್ಕೂ ಒಂದು ಇತಿ-ಮಿತಿ ಇದೆ. ಇಲ್ಲಿಯವರೆಗ ತಿದ್ದಿಕೊಳ್ಳುತ್ತಾರೆ ಅಂದುಕೊಂಡು ಸುಮ್ಮನಾಗಿದ್ದೆವು. ಆದರೆ ಅದು ಆಗಲಿಲ್ಲ ಎಂದು ಎಚ್ಡಿಕೆ ಅಸಮಾಧಾನ ಹೊರಹಾಕಿದರು.