ಮಂಡ್ಯದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಮೊಬೈಲ್​ ಕಿತ್ತುಕೊಂಡು ಗರಂ ಆದ ಡಿಕೆಶಿ

New Project (6)
Published on

ಮಂಡ್ಯ: ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಮೊಬೈಲ್​ ಕಸಿದುಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಕಾಮನ್​ಸೆನ್ಸ್ ಇಲ್ವಾ? ಎಂದು ಸಿಡಿಮಿಡಿಗೊಂಡ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಕಾಂಗ್ರೆಸ್​ ಪಕ್ಷದ 137ನೇ ಸಂಸ್ಥಾಪನ ದಿನಾಚರಣೆ ಹಿನ್ನೆಲೆಯಲ್ಲಿ ಮದ್ದೂರು ಸಮೀಪ ಶಿವಪುರದ ಸತ್ಯಾಗ್ರಹ ಸೌಧದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಕೆಶಿ, ಧ್ವಜಾರೋಹಣ ಮಾಡಲು ತೆರಳುತ್ತಿದ್ದರು. ಈ ವೇಳೆ ಕಾಂಗ್ರೆಸ್​ ಕಾರ್ಯಕರ್ತನೊಬ್ಬ ಡಿಕೆಶಿ ಅವರ ಹಿಂಬದಿ ಬಂದು ಸೆಲ್ಫಿ ತೆಗೆದುಕೊಳ್ಳೋಕೆ ಮೊಬೈಲ್​ ಹಿಡಿದ. ನೂಕುನುಗ್ಗಲಿಂದ ಸಿಟ್ಟಾಗಿದ್ದ ಡಿಕೆಶಿ, ಸೆಲ್ಫಿ ತೆಗೆದುಕೊಳ್ಳೋಕೆ ಕೈ ಚಾಚಿದವನ ಕೈಯಿಂದ ಮೊಬೈಲ್​ ಕಸಿದುಕೊಂಡು ಗರಂ ಆದರು. ಧ್ವಜಾರೋಹಣ ಮಾಡೋದನ್ನ ಬಿಟ್ಟು ಸೆಲ್ಫಿ ತೆಗೆದುಕೊಳ್ಳಬೇಕಾ? ಎಂದು ಸಿಡಿಮಿಡಿಗೊಂಡರು. ವಾಪಸ್​ ಮೊಬೈಲ್​ ಕೊಟ್ಟ ಡಿಕೆಶಿ, ಕಾಮನ್​​ಸೆನ್ಸ್​ ಇಲ್ವಾ? ಎಂದು ಗದರಿದರು. ತಕ್ಷಣ ಅಭಿಮಾನಿಯನ್ನ ಡಿಕೆಶಿ ಗನ್ ಮ್ಯಾನ್ ಹಿಂದಕ್ಕೆ ಎಳೆದು ನಿಲ್ಲಿಸಿದರು.

ಧ್ವಜಾರೋಹಣಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಶಿವಪುರದ ಸತ್ಯಾಗ್ರಹ ಸೌಧಕ್ಕೆ ವಿಶಿಷ್ಟ ಇತಿಹಾಸ ಇದೆ. ಈ ಸ್ಥಳದಲ್ಲಿ ಕಾಂಗ್ರೆಸ್​ ಕಾರ್ಯಕ್ರಮ ನಡೆಯುತ್ತಿರುವುದು ನಮ್ಮ ಪುಣ್ಯ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, 'ಪ್ರಪಂಚದ ಬಿಗ್ಗೆಸ್ಟ್ ಡೆಮಾಕ್ರಸಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ನಮ್ಮ ಇತಿಹಾಸಕ್ಕೂ, ಬಿಜೆಪಿ ಇತಿಹಾಸಕ್ಕೂ ಬಹಳ ವ್ಯತ್ಯಾಸ ಇದೆ. ನಮ್ಮದು ತ್ಯಾಗ, ಬಲಿದಾನದ ಇತಿಹಾಸ. ಯಾರೂ ಪರ್ಮನೆಂಟ್ ಇರಲು ಸಾಧ್ಯವೇ ಇಲ್ಲ. ಇದ್ದಾಗ ಏನು ಮಾಡಿದ್ದೇವೆ ಅನ್ನೋದು ಮುಖ್ಯ. ಕೋವಿಡ್​ನಂತಹ ಕಷ್ಟದ ಸಮಯದಲ್ಲಿ ನನಗೆ ಅಧಿಕಾರ ಸಿಕ್ತು. ನಮ್ಮ ಪ್ರಾಣವನ್ನ ಮುಡಿಪಾಗಿಟ್ಟು ಕರೊನಾ ವಿರುದ್ಧ ಹೋರಾಟ ಮಾಡಿದ್ದೇವೆ. ದೇಶಕ್ಕೆ ಮಾದರಿಯಾಗಿ ಜನರನ್ನ ಉಳಿಸುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಯಾವತ್ತೂ ಅಧಿಕಾರಕ್ಕಾಗಿ ಅಂಟಿ ಕುಳಿತಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net