

ಚನ್ನಪಟ್ಟಣ: ತೃತೀಯ ಲಿಂಗಿ ಸಹೋದರಿಯನ್ನು ಪೀಡಿಸುತ್ತಿದ್ದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸಹೋದರ, ಒಬ್ಬನನ್ನು ಕೊಂದಿದ್ದು, ಮತ್ತೊಬ್ಬನ ಸ್ಥಿತಿ ಗಂಭಿರವಾಗಿದೆ.
ಇಂತಹ ಘಟನರ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಲಾಳಘಟ್ಟ ಗ್ರಾಮದಲ್ಲಿ ಸೋಮವಾರ ನಡೆದಿದೆ. ಆನಂದ್(35) ಮೃತ. ರಾಘವೇಂದ್ರ(33) ಗಾಯಾಳು. ಇಬ್ಬರೂ ಮಂಡ್ಯ ಮೂಲದವರಾಗಿದ್ದು, ತೃತೀಯ ಲಿಂಗಿ ಸಹೋದರ ದರ ಗುರು(30) ಆರೋಪಿ. ಗಾಯಾಳು ರಾಘವೇಂದ್ರ ಮಂಡ್ಯದಲ್ಲಿ ರೌಡಿಶೀಟರ್.
ಚನ್ನಪಟ್ಟಣದ ಮೋಳೆದೊಡ್ಡಿ ಗ್ರಾಮದ ಮೌನ ಅಲಿಯಾಸ್ ಮನು ತೃತೀಯ ಲಿಂಗಿಯಾಗಿದ್ದು, ಕಳೆದ 8 ವರ್ಷಗಳಿಂದ ಮಂಡ್ಯದಲ್ಲಿ ವಾಸವಾಗಿದ್ದು, ಆನಂದ್ ಜತೆ ನಿಕಟ ಸಂಪರ್ಕದಲ್ಲಿದ್ದಳು. ಇತ್ತೀಚೆಗೆ ಮಂಡ್ಯ ತೊರೆದಿದ್ದ ಮೌನ ಕುಟುಂಬದ ಜತೆ ಲಾಳಘಟ್ಟ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಈ ಮಧ್ಯೆ ಆನಂದ್ ಸ್ನೇಹಿತ ರಾಘವೇಂದ್ರ ಜತೆ ಈಕೆಯ ಮನೆಗೆ ಬಂದು ಈ ಮೊದಲಿನಂತೆಯೇ ತನ್ನ ಜತೆ ಇರುವಂತೆ ಪೀಡಿಸುತ್ತಿದ್ದ. ಭಾನುವಾರ ರಾತ್ರಿಯೂ ಲಾಳಘಟ್ಟಕ್ಕೆ ಬಂದು ಗುರು ಜತೆ ಗಲಾಟೆ ನಡೆಸಿದ್ದ. ಸೋಮವಾರ ಮತ್ತೆ ಬಂದು ಪೀಡಿಸಲು ಆರಂಭಿಸಿದಾಗ ಕೋಪಗೊಂಡ ಗುರು ಕುಡುಗೋಲಿನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಆನಂದ್ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿರುವ ರಾಘವೇಂದ್ರನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸರಿಗೆ ಶರಣು: ಸೋದರಿಗೆ ಕಿರುಕುಳ ನೀಡುವುದನ್ನು ಸಹಿಸಲಾಗದೆ ಕೃತ್ಯ ಎಸಗಿದ್ದಾಗಿ ಗುರು ಗ್ರಾಮಾಂತರ ಠಾಣೆಗೆ ಹೋಗಿ ಶರಣಾಗಿದ್ದಾನೆ. ವಿಷಯ ತಿಳಿಯುತ್ತಲೇ ಗ್ರಾಮಾಂತರ ಸಿಪಿಐ ಬಿ.ಶಿವಕುಮಾರ್, ಪಿಎಸ್ಐ ಲಿಯಾಕತ್ ಘಟನಾ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.