

ಹಾಸನ: ಎಂಟನೇ ತರಗತಿ ಓದುವಷ್ಟರಲ್ಲಿ ಶಾಲೆಯ ಸಹವಾಸವೇ ಬೇಡವೆಂದು ಕೃಷಿ ಕೆಲಸ ಮಾಡಿಕೊಂಡಿಕೊಂಡಿದ್ದ ವ್ಯಕ್ತಿ ನಂತರ ಛಲದಿಂದ ಓದಿ ಶಿಕ್ಷಕನಾಗಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವುದು ಮಾತ್ರವಲ್ಲದೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಆಲೂರು ತಾಲೂಕಿನ ಕುಂದೂರು ಹೋಬಳಿ ಸುಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕೆ.ಎಲ್. ಪುರುಷೋತ್ತಮ ಅವರು ಸೆ.5ರ ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಬಾಲ್ಯದಲ್ಲಿ ಶಿಕ್ಷಣದಿಂದ ವಿಮುಖರಾಗಿ ಈಗ ವಿದ್ಯೆ ಕಲಿಸುವ ಗುರುವಾಗಿ, ಮಕ್ಕಳ ಪಾಲಿನ ಆಪದ್ಬಾಂಧವರಾಗಿ ಸರ್ಕಾರಿ ಶಾಲೆ ಉಳಿಯಬೇಕೆಂದು ಪಣ ತೊಟ್ಟು ಶಾಲೆಯ ಏಳಿಗೆಗೆ ಅಪಾರ ಶ್ರಮ ವಹಿಸಿದ್ದಾರೆ.
ಮುಚ್ಚುವ ಆತಂಕದಲ್ಲಿದ್ದ ಶಾಲೆ: ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ, ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸೌಕರ್ಯಗಳ ಕೊರತೆಯಿಂದ ವರ್ಷದಿಂದ ವರ್ಷಕ್ಕೆ ಸುಳಗೋಡು ಶಾಲೆಯಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಲೇ ಇತ್ತು. 2019ರ ಜೂನ್ 11ರಂದು ಸುಳಗೋಡು ಶಾಲೆಗೆ ವರದಿ ಮಾಡಿಕೊಂಡ ಪುರುಷೋತ್ತಮ ಅವರು ಶಾಲೆಯ ವ್ಯವಸ್ಥೆ ಕಂಡು ಅದಕ್ಕೆ ಬೇರೆ ರೂಪ ಕಲ್ಪಿಸಬೇಕೆಂದು ಬಯಸಿದ್ದರು. ಶಾಲೆಗೆ ಅಗತ್ಯ ಸೌಕರ್ಯ ಕಲ್ಪಿಸಿದರೆ ಹಾಗೂ ಗುಣಮಟ್ಟದ ಕಲಿಕೆ ಅಳವಡಿಸಿಕೊಂಡರೆ ಪಾಲಕರು ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸುತ್ತಾರೆಂದು ಆ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ಹಲವು ಯೋಜನೆ ರೂಪಿಸಿದರು. ಈ ಹಿಂದೆ ಕೆರೆಹಳ್ಳಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 11 ವರ್ಷ, ಹುಣಸವಳ್ಳಿಯಲ್ಲಿ 3 ವರ್ಷ ಕೆಲಸ ಮಾಡಿದ್ದ ಅವರು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದ್ದರು. ಅದೇ ಸಂಪ್ರದಾಯವನ್ನು ಸುಳಗೋಡಿನಲ್ಲೂ ಮುಂದುವರೆಸಿದ್ದರಾದರೂ ದಾಖಲಾತಿ ಕೊರತೆಯಿಂದ ಶಾಲೆ ಮುಚ್ಚಬಾರದೆಂಬ ಕಾರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ವಹಿಸಿದರು.
ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ವೈಯಕ್ತಿಕ ಖರ್ಚಿನಿಂದ ಶಾಲೆಗೆ ಪ್ರೊಜೆಕ್ಟರ್, ನಲಿ-ಕಲಿ ಚೇರ್, ಗ್ರೀನ್ ಬೋರ್ಡ್, ಸಿಸಿಟಿವಿ ಕ್ಯಾಮರಾ, ಕಂಪ್ಯೂಟರ್ ವ್ಯವಸ್ಥೆ ಮಾಡಿದರು. 2023-24ನೇ ಸಾಲಿನಲ್ಲಿ ಕಾಂಪೌಂಡ್ ನಿರ್ಮಿಸಿ ಗೋಡೆಗೆ ಭಿತ್ತಿಪತ್ರ ಬರೆಸುವ ಮೂಲಕ ವಿದ್ಯಾರ್ಥಿ ಸ್ನೇಹಿ ವಾತಾವರಣ ಸೃಷ್ಟಿಸಿದ್ದಾರೆ. ಶಾಲೆ ಮುಂಭಾಗ ಚರಂಡಿ ವ್ಯವಸ್ಥೆ ಹಾಳಾಗಿದ್ದನ್ನು ಅರಿತು 33 ಸಾವಿರ ರೂ. ವೈಯಕ್ತಿಕ ಹಣ ಖರ್ಚು ಮಾಡಿ ಸ್ಲಾೃಬ್ ಹಾಗೂ ಕಾಂಕ್ರೀಟ್ ವ್ಯವಸ್ಥೆ ಮಾಡಿದ್ದಾರೆ.
ಸ್ವಂತ ವಾಹನದ ಪರಿಕಲ್ಪನೆ: ಸರ್ಕಾರಿ ಶಾಲೆಗೆ ಮಕ್ಕಳು ಬಾರದೆ ಇರಲು ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬುದನ್ನು ಅರಿತು ಶಿಕ್ಷಕ ಪುರುಷೋತ್ತಮ್ ಸ್ವಂತ ವಾಹನ ಹೊಂದುವ ಯೋಚನೆಯನ್ನು ಸಹೋದ್ಯೋಗಿಗಳ ಮುಂದಿಟ್ಟರು. ಅದಕ್ಕೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದರಾದರೂ ಹಣ ಹಾಗೂ ವಾಹನ ನಿರ್ವಹಣೆ ಜವಾಬ್ದಾರಿ ಹೇಗೆಂಬ ಪ್ರಶ್ನೆ ಉದ್ಭವವಾಯಿತು. ಪುರುಷೋತ್ತಮ್ ಅವರು ಬ್ಯಾಂಕ್‌ನಲ್ಲಿ ಲೋನ್ ಪಡೆದು ವಾಹನ ತರೋಣ. ಚಾಲನೆಯ ಜವಾಬ್ದಾರಿ ನನಗೆ ಬಿಟ್ಟುಬಿಡಿ. ಒಟ್ಟಿನಲ್ಲಿ ಸರ್ಕಾರಿ ಶಾಲೆಯಿಂದ ಮಕ್ಕಳು ವಿಮುಖರಾಗಬಾರದು ಎನ್ನುವುದಷ್ಟೇ ತಮ್ಮ ಧ್ಯೇಯವೆಂದು ಹೇಳಿಬಿಟ್ಟರು. ಆದರೆ ಬ್ಯಾಂಕ್‌ನಲ್ಲಿ ಸರ್ಕಾರಿ ಶಾಲೆಗೆ ಆರ್ಥಿಕ ಸಹಾಯ ದೊರೆಯಲಿಲ್ಲ. ಅದರಿಂದ ವಿಚಲಿತರಾಗದ ಅವರು ಸ್ವತಃ 1.50 ಲಕ್ಷ ರೂ., ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಬಡ್ಡಿ ರಹಿತ 3 ಲಕ್ಷ ರೂ. ಸಾಲ ಪಡೆದು ಅಂದುಕೊಂಡಂತೆ ವಾಹನವನ್ನು ತಂದೇ ಬಿಟ್ಟರು. ಸುತ್ತಲಿನ ಮೆರ್ವೆ, ಮುದ್ದನಹಳ್ಳಿ, ಗರಿಘಟ್ಟ, ಮಂದ್ರ ಗ್ರಾಮಗಳಿಗೆ ನಿತ್ಯ ಬೆಳಗ್ಗೆ ತಾವೇ ವಾಹನ ಓಡಿಸಿಕೊಂಡು ಹೋಗಿ ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದರು. ಆದರೆ ಇತ್ತೀಚೆಗೆ ಸಮಯದ ಅಭಾವದಿಂದಾಗಿ ಚಾಲಕನನ್ನು ನೇಮಿಸಿಕೊಂಡಿದ್ದಾರೆ. ದಾನಿಗಳು ಹಾಗೂ ಸ್ವಂತ ಅಂದಾಜು 15 ಲಕ್ಷ ರೂ.ಗಳನ್ನು ಶಾಲೆಗಾಗಿ ವಿನಿಯೋಗ ಮಾಡಿದ್ದಾರೆ.
ಕೃಷಿಕ ಶಿಕ್ಷಕನಾಗಿದ್ದು ಹೇಗೆ?: ಹೊನರಸೀಪುರ ತಾಲೂಕಿನ ಕಬ್ಬಿನಹಳ್ಳಿ ಗ್ರಾಮದ ಪುರುಷೋತ್ತಮ ಅವರು ನಿವೃತ್ತ ಮುಖ್ಯಶಿಕ್ಷಕ ಕೆ.ಲಕ್ಮೇಗೌಡ ಮತ್ತು ಎಚ್.ಕೆ. ರುಕ್ಮಿಣಿ ದಂಪತಿ ಪುತ್ರ. ಆರ್ಥಿಕವಾಗಿ ಸಬಲರಾಗಿದ್ದರೂ ತಂದೆ ಲಕ್ಮೇಗೌಡ ಆಡಂಬರದ ಬದುಕು ಕಲಿಸಲಿಲ್ಲ. ಎಂಟನೇ ತರಗತಿ ಮುಗಿಯುತ್ತಿದ್ದಂತೆ ನನಗೆ ಓದು ಸಾಕೆನಿಸಿ ಕೃಷಿ ಕೆಲಸದತ್ತ ಗಮನ ಹರಿಸಿದೆ. ಆದರೆ, ತಮ್ಮ ಓದು ಮುಂದುವರಿಸಿ ಶಿಕ್ಷಕನೂ ಆದ. ನನಗಿಂತ ಚಿಕ್ಕವನು ಓದಿ ಶಿಕ್ಷಕನಾದನಲ್ಲ ಎಂಬ ಕೀಳರಿಮೆ ಕಾಡತೊಡಗಿತು. ನಾನು ಅವನಂತೆ ಆಗಬೇಕೆಂದು ನಿರ್ಧರಿಸಿ ಪರೀಕ್ಷೆ ಕಟ್ಟಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸು ಮಾಡಿಕೊಂಡೆ. ಡಿಇಡಿ ತರಬೇತಿ ಪೂರ್ಣಗೊಳಿಸಿ 1998ರಲ್ಲಿ ಶಿಕ್ಷಕ ವೃತ್ತಿಗೆ ನೇಮಕಗೊಂಡೆ ಎಂದು ಪುರುಷೋತ್ತಮ್ ಸ್ಮರಿಸಿದರು.