

ಬೆಂಗಳೂರು: ನಮ್ಮ ಮೆಟ್ರೊ ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಟನೆ ಶನಿವಾರ ಸಂಜೆ 5.45ಕ್ಕೆ ನಡೆದಿದೆ. ಕುಮಾರಸ್ವಾಮಿ ಬಡಾವಣೆ ನಿವಾಸಿ ನವೀನ್ ಕುಮಾರ್ ಅರೋರಾ (57) ಎಂಬುವವರು ರೈಲು ಬರುವ ಸಮಯದಲ್ಲಿ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಏಕಾಏಕಿ ಹಳಿಗೆ ಹಾರಿದ್ದಾರೆ. ರೈಲಿನ ವೇಗ ನಿಯಂತ್ರಿಸಲು ಸಾಧ್ಯವಾಗದ ಪರಿಣಾಮ ದೇಹ ರೈಲಿನಡಿ ಸಿಕ್ಕಿ ಹಾಕಿಕೊಂಡಿದೆ. ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಕೋಣನಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಪೊಲೀಸರು ಹಾಗೂ ಮೆಟ್ರೋ ಭದ್ರತಾ ಸಿಬ್ಬಂದಿ ಹಳಿ ಮೇಲಿದ್ದ ಮೃತದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವ್ಯಕ್ತಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ಘಟನೆ ನಡೆಯುತ್ತಿದ್ದಂತೆ ಹಸಿರು ಮಾರ್ಗದಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಯಲಚೇನಹಳ್ಳಿ ನಿಲ್ದಾಣದಿಂದ ರೇಷ್ಮೆ ಸಂಜೆ ಕಡೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿತು. ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿದ್ದ ಜನರು ಪರದಾಟ ಅನುಭವಿಸಿದರು. ಪ್ರಯಾಣಿಕರು ಬಸ್, ಕ್ಯಾಬ್ ಮೊರೆ ಹೋದರು. ರಾತ್ರಿ 8.45ರಿಂದ ಹಸಿರು ಮಾರ್ಗದಲ್ಲಿ ಎಂದಿನಂತೆ ರೈಲು ಸಂಚರಿಸಿದೆ. ನೇರಳೆ ಮಾರ್ಗದಲ್ಲಿ ಯಾವುದೇ ವ್ಯತ್ಯಯ ಉಂಟಾಗಿರಲಿಲ್ಲ.
ಭದ್ರತೆ ಹೆಚ್ಚಿಸಲು ಆಗ್ರಹ
ಮೆಟ್ರೋ ನಿಲ್ದಾಣಗಳಲ್ಲಿ ಒಂದರ ಹಿಂದೆ ಒಂದರಂತೆ ಆತ್ಮಹತ್ಯೆ ಯತ್ನ ಪ್ರಕರಣಗಳು ಟಿಸುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ, ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹಳಿಗೆ ಹೋಗಲಾಗದಂತೆ ಅಥವಾ ಜಿಗಿಯದಂತೆ ನಿಲ್ದಾಣಗಳಲ್ಲಿ ಸ್ಕ್ರೀನ್ ಡೋರ್ ಅಳವಡಿಸುವ ಜತೆಗೆ ಅನುಮಾನಾಸ್ಪದವಾಗಿ ವರ್ತಿಸುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲು ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಳಕ್ಕೂ ಒತ್ತಾಯ ಕೇಳಿಬಂದಿದೆ.
ಪ್ರಯಾಣಿಕರು ಅರ್ಧ ದಾರಿಯಲ್ಲೇ ಇಳಿದರು...
ವ್ಯಕ್ತಿ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ವಿದ್ಯುತ್ ಸಂಚಾರ ಸ್ಥಗಿತಗೊಂಡಿದೆ. ಮುಂದೆ ರೈಲು ಸಂಚರಿಸಿಲ್ಲ. ಹೀಗಾಗಿ ರೈಲಿನಿಂದ ಹೊರಬಂದ ಕೆಲ ಪ್ರಯಾಣಿಕರು, ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣ ಪಕ್ಕದ ಬ್ರಿಡ್ಜ್ ಮೇಲೆ ಕೊಂಚ ದೂರ ನಡೆದುಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜ್ಞಾನಭಾರತಿ ಕ್ಯಾಂಪಸ್ನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಧ್ರುವ್ ಠಕ್ಕರ್ (19) ಕಳೆದ ಮಾ.21ರಂದು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುತ್ತಿದ್ದಾಗಲೇ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಖಿನ್ನತೆಯಿಂದ ಬಳಲುತ್ತಿದ್ದ ಈತ, ಹಠಾತ್ತನೆ ಹಳಿಗೆ ಜಿಗಿದಿದ್ದರಿಂದ ರೈಲಿನಡಿ ಸಿಲುಕಿ ದೇಹ ಎರಡು ತುಂಡಾಗಿತ್ತು.
ನಮ್ಮ ಮೆಟ್ರೋ ಭದ್ರತೆ ಸೇರಿದಂತೆ, ಆತ್ಮಹತ್ಯೆ ಯತ್ನ ಪ್ರಕರಣಗಳಿಂದ ಇತ್ತೀಚೆಗೆ ಸಾಕಷ್ಟು ಸುದ್ದಿಯಾಗುತ್ತಿದೆ. 8 ತಿಂಗಳ ಅವಧಿಯಲ್ಲಿ ಇಬ್ಬರು ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಮತ್ತೆ ನಿಲ್ದಾಣದ ಭದ್ರತೆ ವಿಚಾರಕ್ಕೆ ಪ್ರಯಾಣಿಕರು ಬಿಎಂಆರ್ಸಿಎಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆಗಾಗಿ ದೆಹಲಿ ಹಾಗೂ ಚೆನ್ನೈ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್ಫಾರಂ ಸ್ಕ್ರೀನ್ ಡೋರ್ಗಳನ್ನು ಅಳವಡಿಸಲಾಗಿದೆ. ಆದರೆ, ನಮ್ಮ ಮೆಟ್ರೋ ಆರಂಭವಾಗಿ 13 ವರ್ಷ ಕಳೆದರೂ, ಯಾವುದೇ ನಿಲ್ದಾಣದಲ್ಲಿ ಪಿಎಸ್ಡಿ ದ್ವಾರಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆತ್ಮಹತ್ಯೆ ಯತ್ನ ಪ್ರಕರಣಗಳು ನಡೆಯುತ್ತಿವೆ ಎಂದು ಪ್ರಯಾಣಿಕರು ಅಕ್ಷೇಪಿಸಿದ್ದಾರೆ.