ಮಾಗಡಿ ರಂಗನಾಥಸ್ವಾಮಿ ರಥೋತ್ಸವ ನಾಳೆ: ಭಕ್ತರ ಸ್ವಾಗತಕ್ಕೆ ಸಜ್ಜಾಗಿದೆ ದೇಗುಲ

magadi ranganathaswamy
Published on

ಮಾಗಡಿ: ಪಶ್ಚಿಮ ವೆಂಕಟಾಚಲಪತಿ ಎಂದೇ ಹೆಸರಾಗಿರುವ ಮಾಗಡಿ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಏ.14ರ ಮಧ್ನಾಹ್ನ 11.30ರಿಂದ 12.45 ಗಂಟೆವರೆಗೆ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದ್ದು, ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಏ.16ರ ರಾತ್ರಿ 12ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ.

ರಂಗನಾಥನ ಆಲಯದಲ್ಲಿ ವಿವಿಧ ದೇವರುಗಳ ಸಮೂಹವೇ ನೆಲೆ ನಿಂತಿದೆ. ಈ ದೇವಗಣವೆಲ್ಲ ರಂಗನಾಥನ ಸುತ್ತಲೂ ಕಾವಲಿಗೆ ನಿಂತಂತಿದೆ. ಸಾಲಿಗ್ರಾಮ, ಮಾಂಡವ್ಯ ಮಹರ್ಷಿ, ರಂಗನಾಥನ ಬಲಭಾಗ ಶ್ರೀ ವಿಶ್ವಕ್ಸೇನ, ದ್ವಾರಪಾಲಕರಾದ ಜಯ ವಿಜಯರು, ಗರ್ಭಗುಡಿಯಿಂದ ಹೊರ ಬಂದರೆ ಪ್ರಾಕಾರದಲ್ಲಿ ಗಣಪತಿ, ಗರುಡ, ಸೀತಾಲಕ್ಷ್ಮೀ, ಎಂಟ ಆಳ್ವಾರರು, ದೇಶಿಕರು, ರಾಮಾನುಜಾಚಾರ್ಯರು, ಶ್ರೀರಾಮ, ಗೋವಿಂದರಾಜಸ್ವಾಮಿ, ಕಾಳಿಂಗಮರ್ದನ, ಬೆಳೆಯೋ ರಂಗ, ಸರೋಜಲಕದೇವಿ ಅಮ್ಮನವರು, ಅನ್ನಪೂರ್ಣೇಶ್ವರಿ, ಆಂಜನೇಯ, ಸುದರ್ಶನ ದೇವರುಗಳ ದರ್ಶನವಾಗುತ್ತದೆ. ಈ ದೇವರುಗಳ ಸಮೂಹ ದರ್ಶನ ಪಡೆಯುತ್ತಾ ರಂಗನಾಥ ಸ್ವಾಮಿಯ ಕೃಪೆಗೆ ಪಾತ್ರರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.

ತಿರುಪತಿ ವೆಂಕಟೇಶ್ವರನ ದರ್ಶನ ಸಾಧ್ಯವಾಗದವರು ಮಾಗಡಿ ರಂಗನಾಥನ ದರ್ಶನ ಮಾಡಿದರೆ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದಷ್ಟೇ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ದೇವಾಲಯದಲ್ಲಿರುವ ಪಾಕಶಾಲೆ ವಿಶೇಷವಾಗಿದ್ದು, ಬರುವ ಭಕ್ತರಿಗೆ ವಿತರಿಸಲು ಪುಳಿಯೋಗರೆ ಕಲೆಸಲು ಶತಮಾನಗಳಿಂದಲೂ ಬಳಸುತ್ತಿದ್ದ ಹಳೆಯ ಕಲ್ಲನ್ನು ಕಾಣಬಹುದು. ಧ್ವಜಸ್ತಂಭ ಹಾಗೂ ರಾಜಗೋಪುರವನ್ನು ಮರುನಿರ್ಮಾಣ ಮಾಡಲಾಗಿದೆ.

ಬೆಂಗಳೂರಿನಿಂದ 50 ಕಿ.ಮೀ. ಸಾಗಿ ಬಲ ಭಾಗದಲ್ಲಿ ನರಸಿಂಹ ದೇವರ ಬೆಟ್ಟ ಕಾಣಿಸುತ್ತದೆ. ಅಲ್ಲಿಂದ ಅರ್ಧ ಫರ್ಲಾಂಗು ಚಲಿಸುವ ಮುನ್ನ ಬಲ ಭಾಗದಲ್ಲಿ ಕೆಂಪೇಗೌಡರ ಕಾಲದ ಕಾವಲು ಗೋಪುರ ಭಕ್ತರನ್ನು ಸ್ವಾಗತಿಸುತ್ತದೆ. ಗರುಡಗಂಬ, ಪುಷ್ಕರಣಿ, ಪ್ರಾಕಾರದ ಮೇಲೆ ಒರಟು ಕಲ್ಲಿನಲ್ಲಿ ಮಾಡಿರುವ ದ್ವಾರ ನೋಡುಗರನ್ನು ಆಕರ್ಷಿಸುತ್ತದೆ.

ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಹಿನ್ನೆಲೆ ಈಗಾಗಲೇ ದನಗಳ ಜಾತ್ರೆಯೂ ನಡೆದಿದೆ. ರಥೋತ್ಸವದಲ್ಲಿ ತೇರು ತೊಂದರೆಯಿಲ್ಲದೆ ಮುಂದೆ ಸಾಗಿದರೆ ಆ ವರ್ಷ ಮಳೆ, ಬೆಳೆ ಸಮೃದ್ಧವಾಗಿ ಆಗುತ್ತೆ ಎಂಬ ಪ್ರತೀತಿ ಇದೆ. ಭವರೋಗ ಹರ, ಸಂತಾನ ಭಾಗ್ಯ ಸಂಕಷ್ಟ ಪರಿಹಾರಕ ಎಂದೆಲ್ಲಾ ಮಾಗಡಿ ರಂಗನಾಥಸ್ವಾಮಿಗೆ ಖ್ಯಾತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net