ತುಮಕೂರಲ್ಲಿ ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಶಿಕ್ಷಕನಿಗೆ ಆಯ್ತು ತಕ್ಕ ಶಾಸ್ತಿ!

New Project(22)
Published on

ತುಮಕೂರು: ಇಲ್ಲೊಬ್ಬ ಶಿಕ್ಷಕ ಮಕ್ಕಳಿಗೆ ಪಾಠ ಮಾಡುವ ಬದಲು ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಸಿಕ್ಕಿಬಿದ್ದಿದ್ದಾನೆ.

ಮಧುಗಿರಿ ತಾಲೂಕಿನ ದೊಡ್ಡಹಟ್ಟಿ ಗ್ರಾಮದ ಸರ್ಕಾರಿ ಶಾಲೆ ಸಹ ಶಿಕ್ಷಕ ಎಂ.ಸುರೇಶ್, ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆ ಪಡೆದು ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿ ಕಿರುಕುಳ ಕೊಡುತ್ತಿದ್ದ. ಇವನ ವರ್ತನೆಯಿಂದ ಸಿಟ್ಟಿಗೆಟ್ಟ ಗ್ರಾಮಸ್ಥರು ಶಿಕ್ಷಕನಿಗೆ ತಕ್ಕ ಪಾಠ ಕಲಿಸಿದ್ದಾರೆ.

ವಿದ್ಯಾರ್ಥಿಗಳ ವ್ಯಾಸಂಗ ದೃಢೀಕರಣ ಪತ್ರ ಸೇರಿ ಇನ್ನಿತರ ಕಾರಣಗಳಿಗೆ ಶಾಲೆಗೆ ಬರುವ ವಿದ್ಯಾರ್ಥಿಗಳ ಪಾಲಕರೊಂದಿಗೆ ಸಲುಗೆಯಿಂದ ವರ್ತಿಸಿ ಅವರ ಮೊಬೈಲ್​ ಸಂಖ್ಯೆ ಪಡೆದು ಪ್ರತಿದಿನ ಎಸ್​ಎಂಎಸ್​, ವಿಡಿಯೋ ಸಂದೇಶ ಕಳುಹಿಸುವುದು. ಅಶ್ಲೀಲ ಪದ ಬಳಸುವುದು, ವಿದ್ಯಾರ್ಥಿಗಳನ್ನು ಮಾತನಾಡಿಸುವ ನೆಪದಲ್ಲಿ ಕರೆ ಮಾಡಿ ಅವರ ತಾಯಂದಿರ ಬಳಿ ಮಾತನಾಡುತ್ತಿದ್ದ ಎನ್ನಲಾಗಿದೆ.

ತರಗತಿ ಮುಗಿದ ಬಳಿಕ ವಿದ್ಯಾರ್ಥಿಗಳ ತಾಯಂದಿರಿಗೆ ವಾಟ್ಸ್​ಆ್ಯಪ್​ನಲ್ಲಿ ಸುರೇಶ್​ ಅಶ್ಲೀಲವಾಗಿ ಮೆಸೇಜ್ ಮಾಡಿ‌ ಕಿರುಕುಳ ಕೊಡುವುದು ಮಾತ್ರವಲ್ಲ, ಗ್ರಾಮದ ಕೆಲ ಯುವಕರೊಂದಿಗೆ ಸುರೇಶ್ ಪ್ರತಿನಿತ್ಯ ಪಾರ್ಟಿ ಮಾಡುತ್ತಾ ಕುಣಿಸು ಕುಪ್ಪಳಿಸುತ್ತಿದ್ದ.

ಶಾಲೆಗೆ ನಿರಂತರ ಗೈರಾಗುವುದು, ಶಾಲೆಗೆ ಬಂದರೂ ಬೇಗನೆ ಹೊರಡುವುದು, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ತಿಂಗಳ ಹಿಂದೆ ಗ್ರಾಮಸ್ಥರು ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ ಅವರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ತನಿಖೆ ನಡೆಸಿದಾಗ ಆರೋಪ ಸಾಬೀತಾಗಿದೆ. ಹಾಗಾಗಿ ಶಿಕ್ಷಕ ಸುರೇಶ್​ನನ್ನು ಕೆಲಸದಿಂದ ಸೋಮವಾರ ಅಮಾನತು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net