'ಅಭಿ'ಮಾನದ ಅನ್ನಸಂತರ್ಪಣೆ: ಊಟ ಬಡಿಸಿದ ಅಶ್ವಿನಿ, ನೋವಿನಲ್ಲೇ ಊಟ ಮಾಡುತ್ತಿರುವ ಅಭಿಮಾನಿಗಳು

New Project(5)
Published on

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅವರ ಪುಣ್ಯಸ್ಮರಣೆ ಹಿನ್ನೆಲೆ ದೊಡ್ಮನೆ ಕುಟುಂಬಸ್ಥರಿಂದ ಅರಮನೆ ಮೈದಾನದಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಸಂತರ್ಪಣೆ ಕಾರ್ಯ ನಡೆಯುತ್ತಿದ್ದು, ಅಭಿಮಾನಿಗಳಿಗೆ ಸ್ವತಃ ಅಶ್ವಿನಿ ಪುನೀತ್​ ಅವರೇ ಊಟ ಬಡಿಸಿದರು.

600 ಮಂದಿ ನುರಿತ ಬಾಣಸಿಗರು ಪ್ರತ್ಯೇಕವಾಗಿ ಸಸ್ಯಹಾರ ಮತ್ತು ಮಾಂಸಹಾರ ಊಟ ತಯಾರಿ ಮಾಡಿದ್ದು, ಏಕಕಾಲಕ್ಕೆ 5 ಸಾವಿರ ಮಂದಿ ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಖುದ್ದು ಶಿವರಾಜ್​ಕುಮಾರ್​ ಮತ್ತು ರಾಘವೇಂದ್ರ ರಾಜ್​ಕುಮಾರ್​ ಇಬ್ಬರೂ ಅಭಿಮಾನಿಗಳಿಗೆ ಊಟ ಬಡಿಸುತ್ತಿದ್ದಾರೆ. ಪುನೀತ್​ರ ಪತ್ನಿ ಅಶ್ವಿನಿ ಅವರೂ ಕೆಲ ಕಾಲ ಊಟ ಬಡಿಸಿದರು.

ತಮಿಳುನಾಡಿನಿಂದಲೂ ಅಪ್ಪು ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದು, ನೋವಿನಿಂದಲೇ ದೊಡ್ಮನೆಯವರು ಬಡಿಸುತ್ತಿರುವ ಊಟ ಮಾಡುತ್ತಿದ್ದಾರೆ. ಬಹುತೇಕರು ಕೆಲಸಕ್ಕೆ ರಜೆ ಮಾಡಿ ಆಗಮಿಸಿದ್ದಾರೆ.

ಅಭಿಮಾನಿಗಳಿಗೆ ಊಟ ಹಾಕಿಸಬೇಕು ಎಂಬುದು ಅಪ್ಪು ಅವರ ಆಸೆಯಾಗಿತ್ತು. ಆದರೆ ಆ ಆಸೆ ಈಡೇರುವ ಮುನ್ನವೇ ಅಪ್ಪು ಅಕಾಲಿಕ ನಿಧನರಾದರು. ಅಪ್ಪು ಅಭಿಮಾನಿಗಳು ನೋವಿನಲ್ಲೇ ಊಟ ಮಾಡುತ್ತಿದ್ದು, ಮತ್ತೆ ಹುಟ್ಟಿ ಬನ್ನಿ ರಾಜಕುಮಾರ ಎಂದು ಕಂಬನಿ ಮಿಡಿಯುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಒಂದೆಡೆ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಅಪ್ಪು ಹೆಸರಲ್ಲು ರಕ್ತದಾನ ಕಾರ್ಯವೂ ನಡೆಯುತ್ತಿದೆ. ನಟ ಶಿವರಾಜ್​ಕುಮಾರ್​ ಕೂಡ ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net