

ಯಾದಗಿರಿ: ಟಂಟಂ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಶಹಾಪುರ ತಾಲೂಕಿನ ಎಂ.ಕೋಳೂರು ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ವಡಿಗೇರ ತಾಲೂಕಿನ ಮನಮಟಗಿಯಿಂದ ದೇವದುರ್ಗ ತಾಲೂಕಿನ ಹೂವಿನಹಡಗಿಗೆ ಕೂಲಿ ಕೆಲಸಕ್ಕೆ ಟಂಟಂ ವಾಹನದಲ್ಲಿ ಮಹಿಳೆಯರು ಹೋಗುತ್ತಿದ್ದರು. ಸಿಮೆಂಟ್ ತುಂಬಿದ್ದ ಲಾರಿ ಶಹಾಪುರ ಕಡೆಗೆ ಬರುತ್ತಿತ್ತು. ಎಂ.ಕೋಳೂರು ಗ್ರಾಮದ ಬಳಿ ಇವೆರಡೂ ವಾಹನ ಅಪಘಾತಕ್ಕೀಡಾಗಿದ್ದು, ಸ್ಥಳದಲ್ಲೇ ಐವರು ಮೃತಪಟ್ಟಿದ್ದು, 6 ಜನರ ಸ್ಥಿತಿ ಗಂಭೀರವಾಗಿದೆ.
ಅಯ್ಯಮ್ಮ(60), ಶರಣಮ್ಮ(40), ಕಾಸೀಂಬೀ(40), ಭೀಮಬಾಯಿ(40) ಮತ್ತು ದೇವಿಂದ್ರಮ್ಮ(70) ಮೃತರು. ಮೃತರೆಲ್ಲರೂ ವಡಗೇರ ತಾಲೂಕಿನ ಮುನಮುಟಗಿ ಗ್ರಾಮಸ್ಥರು. ಜಮೀನಿನಲ್ಲಿ ಕೂಲಿ ಕೆಲಸಕ್ಕೆಂದು ಇವರು ತೆರಳುತ್ತಿದ್ದರು. ಅಪಘಾತದಲ್ಲಿ ಮೃತಪಟ್ಟವರ ಶವಗಳು ರಸ್ತೆ ಬದಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೃತ ದೇಹಗಳ ಬಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಹಾಪುರ ಪೊಲೀಸರು ಪರಿಶೀಲನೆ ನಡೆಸಿ, ಶವಗಳನ್ನು ಶವಾಗಾರಕ್ಕೆ ರವಾನಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.