ಬೆಂಗಳೂರಲ್ಲಿ ಬೈಕ್​ ಮೇಲೆ ಮರದ ದಿಮ್ಮಿ ಬಿದ್ದು ನವವಿವಾಹಿತ ಸಾವು! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ

accident
Published on

ಬೆಂಗಳೂರು: ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್​ ಮೇಲೆ ಮರದ ದಿಮ್ಮಿಗಳು ಬಿದ್ದ ಪರಿಣಾಮ ನವವಿವಾಹಿತ ಮೃತಪಟ್ಟ ಘಟನೆ ನಾಗರಬಾವಿಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಮುಕೇಶ್ (28) ಮೃತ ದುರ್ದೈವಿ. ಈತನಿಗೆ 7 ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದು, ಪುಟ್ಟ ಕಂದನ ಸ್ವಾಗತಕ್ಕೆ ಇಡೀ ಕುಟುಂಬ ಕಾತರದಿಂದ ಕಾಯುತ್ತಿದೆ. ದುರ್ವಿಧಿ ನವದಂಪತಿ ಬಾಳಲ್ಲಿ ಆಟವಾಡಿದ್ದು, ಮುಕೇಶ್​ ಚಿಕ್ಕ ವಯಸ್ಸಿಗೇ ಬಾರದ ಲೋಕಕ್ಕೆ ಹೋಗಿದ್ದಾರೆ.

ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಮುಕೇಶ್​, ಬೆಂಗಳೂರಿನ ನಂದಿನಿ ಲೇಔಟ್​ನಲ್ಲಿ ವಾಸವಿದ್ದರು. ತಿರುವಣ್ಣಾಮಲೈನಲ್ಲಿರುವ ತಾಯಿ ಮತ್ತು ಅಜ್ಜಿಯನ್ನು ನೋಡಲು ಮುಕೇಶ್​ ಹೋಗಿದ್ದ. ವಾಪಸ್ ಬೆಂಗಳೂರಿಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ ಮುಕೇಶ್​ನನ್ನು ಮನೆಗೆ ಕರೆದೊಯ್ಯಲು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಡೇವಿಡ್​ ಎಂಬಾತ ಬೈಕ್​ ತಂದಿದ್ದ. ಡೇವಿಡ್ ಬೈಕ್​ ಚಲಾಯಿಸುತ್ತಿದ್ದ. ಬೈಕ್​ನ ಹಿಂಬದಿಯಲ್ಲಿ ಮುಕೇಶ್​ ಕುಳಿತ್ತಿದ್ದ.

ಬೃಹತ್​ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯು ನಾಗರಬಾವಿಯ ನಮ್ಮೂರ ದಿಣ್ಣೆ ಸಮೀಪದ ರಸ್ತೆಯಲ್ಲಿ ಪಲ್ಟಿಯಾಗಿದ್ದು, ದಿಮ್ಮಿಗಳು ಎರಡು ಬೈಕ್​ಗಳ ಮೇಲೆ ಬಿದ್ದಿವೆ. ಪರಿಣಾಮ ಒಂದು ಬೈಕ್​ನಲ್ಲಿದ್ದ ಮುಕೇಶ್​ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಡೇವಿಡ್​ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮತ್ತೊಂದು ಬೈಕ್​ ಸವಾರ ಶಿವು(26) ಎಂಬಾತನಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಕೇಶ್​ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net