ಸ್ವಲ್ಪ ಯಾಮಾರಿದ್ರೂ ಡೇಂಜರ್​ ತಪ್ಪಿದಲ್ಲ!

RMGmPh-Ph-001-M.G. Road Town-Road Gundi Samsye Photo- 30-9-24
Published on

ಎಂ.ಜಿ.ರಸ್ತೆಯ ದುಸ್ಥಿತಿ > ಗುಂಡಿಯಿಂದ ಪರದಾಡುತ್ತಿರುವ ಸಾರ್ವಜನಿಕರು

ರಾಮನಗರ

ನಗರದ ಎಂ.ಜಿ.ರಸ್ತೆಯಲ್ಲಿ ರಸ್ತೆ ಮಧ್ಯೆಯೇ ಗುಂಡಿಯಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾದೆ. ಕೂಡಲೇ ಸಂಬಂಧಪಟ್ಟವರು ಗುಂಡಿಮುಚ್ಚಿ ಅನಾಹುತ ತಪ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಕುಡಿಯುವ ನೀರು ಸಂಪರ್ಕ ಕಾಮಗಾರಿಗಾಗಿ ನಗರದ ರಸ್ತೆ ಮಧ್ಯೆ ಜಲಮಂಡಳಿಯಿಂದ ಪೈಪ್​ ಅಳವಡಿಸಲಾಗಿದೆ. ಅಗೆದ ಜಾಗದಲ್ಲಿ ಮಣ್ಣುಮುಚ್ಚಿ ಡಾಂಬರೀಕರಣ ಕೂಡ ಮಾಡಲಾಗಿದೆ. ಆದರೆ, ಪೈಪ್​ ಅಳವಡಿಸಿದ ಸಂದರ್ಭದಲ್ಲಿ ಪೈಪಿನ ಎರಡೂ ಬದಿಯಲ್ಲಿ ಸರಿಯಾಗಿ ಮಣ್ಣು ಸಂಗ್ರಹವಾಗದೆ, ಡಾಂಬರೀಕರಣವಾದ ನಂತರ ಮಳೆ ಬಂದು ರಸ್ತೆ ಮಧ್ಯೆ ಹಳ್ಳ ಬಿದ್ದು ಗುಂಡಿಗಳು ಉಂಟಾಗಿದೆ.

ನಗರದ ಪ್ರಮುಖ ವಾಣಿಜ್ಯ ರಸ್ತೆ ಇದಾಗಿದ್ದು, ಅಲ್ಲದೆ ನಗರದ ಚಾಮುಂಡೇಶ್ವರಿ, ಬನ್ನಿಮಹಾಂಕಾಳಿ ಅಮ್ಮನವರ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಇದಾಗಿದೆ. ನೂರಾರು ಅಂಗಡಿಗಳು ಇದೇ ರಸ್ತೆಯ ಇಕ್ಕೆಲಗಳಲ್ಲಿದ್ದು, ಲಾಂತರ ಮಂದಿ ಓಡಾಡುವ ಹಾದಿಯಾಗಿದೆ.

ರಸ್ತೆಯಲ್ಲಿ ವಾಹನ ದಟ್ಟಣೆ ಇರುವ ಕಾರಣ ಗುಂಡಿಯಿಂದ ಸವಾರರಿಗೆ ತಲೆನೋವಾಗಿದೆ. ಇದರ ಜತೆಗೆ ಪಾದಾಚಾರಿಗಳಿಗೂ ಗುಂಡಿ ಸಮಸ್ಯೆ ಕಾಡುತ್ತಿದ್ದು, ಸ್ವಲ್ಪ ಯಾಮಾರಿ ಮಕ್ಕಳು, ಮಹಿಳೆಯರು ಕಾಲು ಹಾಕಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ದ್ವಿಚಕ್ರ ವಾಹನ ಸವಾರರು ಗುಂಡಿ ಮೇಲೆ ಹಾದುಹೋಗುವಾಗ ಬಿದ್ದು ಏಳುವುದು ಸಾಮಾನ್ಯವಾಗಿದೆ.

ಜಲಮಂಡಳಿ ಅಧಿಕಾರಿಗಳು ಇದೇ ರಸ್ತೆಯಲ್ಲಿ ಓಡಾಟ ನಡೆಸುತ್ತಾರೆ. ಸಮಸ್ಯೆ ಕಂಡು ಬಂದರೂ ರಸ್ತೆ ಸರಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಜಲಮಂಡಳಿ ನಿರ್ಲಕ್ಷ್ಯ ವಹಿಸುತ್ತಿದೆ. ಕೂಡಲೇ ಹಳ್ಳಬಿದ್ದ ರಸ್ತೆ ಗುಂಡಿಯನ್ನು ಸಿಮೆಂಟ್​ ಹಾಕಿ ಭದ್ರಪಡಿಸಬೇಕು. ಸಾರ್ವಜನಿಕರ ಓಡಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೂಚನಾ ಗುರುತು ಹಾಕಿಲ್ಲ

ರಸ್ತೆ ಗುಂಡಿ ಬಿದ್ದಿದ್ದರೂ ನೂರಾರು ವಾಹನಗಳು, ಸಾವಿರಾರು ಜನರು ನಿತ್ಯ ಓಡಾಟ ನಡೆಸುತ್ತಿದ್ದರೂ ಜಲಮಂಡಳಿಯವರು ಗುಂಡಿಬಿದ್ದ ಸ್ಥಳದಲ್ಲಿ ಯಾವುದೇ ಸೂಚನೆ ನೀಡುವ ಗುರುತು ಹಾಕಿಲ್ಲ. ಜತೆಗೆ ನಗರಸಭೆಯವರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಜಲಮಂಡಳಿಯರು ರಸ್ತೆ ಸರಿಪಡಿಸಬೇಕು ಎಂ.ಜಿ..ರಸ್ತೆಯಲ್ಲಿ ಉಂಟಾಗಿರುವ ಸಮಸ್ಯೆ ತಿಳಿದುಬಂದಿದೆ. ಕೂಡಲೇ ಜಲಮಂಡಳಿಯರಿಗೆ ರಸ್ತೆ ಗುಂಡಿ ಸರಿಪಡಿಸುವಂತೆ ತಿಳಿಸಲಾಗುತ್ತದೆ. ಜತೆಗೆ ಎಲ್ಲೆಲ್ಲಿ ಆ ರೀತಿ ಆಗಿವೆ ಎಂಬುದನ್ನು ಪರಿಶೀಲಿಸಿ, ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.

ಡಾ.ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net