ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಗ್ರಂಥಾಲಯ

ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಗ್ರಂಥಾಲಯ
Published on

ಕೆ.ಆರ್.ನಗರ: ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಗ್ರಂಥಾಲಯ ಆರಂಭಿಸಿ ಮನೆ, ಮನಗಳಲ್ಲಿ ಜ್ಞಾನದ ದೀವಿಗೆ ಹಚ್ಚಲು ಸಹಕರಿಸಿ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲೂಕಿನ ಮಾವತ್ತೂರು ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಮತ್ತು ನಾಗರಿಕರು ನಿಗದಿತ ಸಮಯದಲ್ಲಿ ಗ್ರಂಥಾಲಯಗಳಿಗೆ ಭೇಟಿ ನೀಡಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ಕಾರ್ಯಕ್ಕೆ ಇನ್ನಷ್ಟು ಬೆಂಬಲಿಸಲು ಸಂಕಲ್ಪಿಸಿದ್ದೇನೆ ಎಂದರು.

ಗ್ರಂಥಾಲಯಗಳು ಅರಿವಿನ ಕೇಂದ್ರಗಳು. ಅಲ್ಲಿಗೆ ಭೇಟಿ ನೀಡಿದರೆ ನಮ್ಮ ಜ್ಞಾನ ಭಂಡಾರ ವಿಕಸನವಾಗಲಿದೆ. ಇದನ್ನು ಅರಿತು ಪಾಲಕರು ತಮ್ಮ ಮಕ್ಕಳನ್ನು ಗ್ರಂಥಾಲಯಕ್ಕೆ ಹೋಗಲು ಪ್ರೇರಣೆ ನೀಡಬೇಕೆಂದರು.

ವಿವಿಧ ಕಾರ್ಯಕ್ರಮಗಳ ಹೆಸರಿನಲ್ಲಿ ಅನಗತ್ಯ ಹಣ ಪೋಲು ಮಾಡುವ ಬದಲು ಮುಂಬರುವ ದಿನಗಳಲ್ಲಿ ಗ್ರಂಥಾಲಯಗಳಿಗೆ ಪುಸ್ತಕ ದಾನ ನೀಡಬೇಕೆಂದು ಗ್ರಾಮಸ್ಥರಿಗೆ ರವಿಶಂಕರ್ ಮನವಿ ಮಾಡಿದರು.

ಮಾವತ್ತೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಲು ಈಗಾಗಲೇ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನಷ್ಟು ಅನುದಾನ ಕೊಡಿಸುತ್ತೇನೆಂದು ಭರವಸೆ ನೀಡಿದರು. ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ನಡೆಯಬೇಕಾದರೆ ಮತದಾರರು ಚುನಾಯಿತ ಸದಸ್ಯರೊಂದಿಗೆ ಕೈ ಜೋಡಿಸಬೇಕೆಂದರು.

ಗ್ರಾಪಂ ಅಧ್ಯಕ್ಷೆ ಸುಕನ್ಯಾ, ಉಪಾಧ್ಯಕ್ಷೆ ಭವ್ಯಾ ಶಂಕರ್, ಸದಸ್ಯರಾದ ಜ್ಯೋತಿ, ದೇವಯ್ಯ, ಮಹದೇವ್, ಲೋಹಿತ್, ಜಗದೀಶ್‌ರಾಜೇ ಅರಸ್, ಪಿಡಿಒ ಜಿ.ಎಲ್.ಧನಂಜಯ, ಗ್ರಂಥಾಲಯದ ನೌಕರ ರಂಗೇಶ, ಮುಖಂಡರಾದ ಮಹದೇವ ನಾಯಕ, ಮಹೇಶ ಅರಸ್, ಮಾಲೇಗೌಡ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net