

ಯಲ್ಲಾಪುರ: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮನೆಯಂಗಳದಲ್ಲಿ ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳ ಮಕ್ಕಳಿಗೆ ಉಚಿತವಾಗಿ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳ ಕುರಿತು ಪಾಠ ಮಾಡುವ ಅಪರೂಪದ ‘ವಸಂತ ಸಂಸ್ಕೃತಿ ಬೇಸಿಗೆ ಶಿಬಿರ’ ತಾಲೂಕಿನ ಆನಗೋಡ ಸಮೀಪದ ಹಸರಪಾಲಿನಲ್ಲಿ ನಡೆದಿದ್ದು ಮಾದರಿಯಾಗಿದೆ.
ಹಸರಪಾಲಿನ ವಿಶ್ವೇಶ್ವರ ಭಟ್ಟರ ಮನೆಯಲ್ಲಿ ರೂಪಾ ಹಾಗೂ ಮಹೇಶ ಭಟ್ಟ ಕುಟುಂಬದವರು 10 ದಿನಗಳ ಈ ವಿಶಿಷ್ಟ ಶಿಬಿರವನ್ನು ಯಶಸ್ವಿಯಾಗಿ ನಡೆಸಿದ್ದಾರೆ.
35ಕ್ಕೂ ಹೆಚ್ಚು ಮಕ್ಕಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಮಕ್ಕಳು ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮೌಲ್ಯ, ಬೇರೆ ಬೇರೆ ಕೌಶಲಗಳನ್ನು ಕಲಿತು, ರಜೆಯನ್ನು ಸದುಪಯೋಗಪಡಿಸಿಕೊಳ್ಳಲು ಅನುಕೂಲವಾಗಲೆಂಬ ಉದ್ದೇಶದಿಂದ ನಡೆಸಿದ ಈ ಶಿಬಿರ ನಿರೀಕ್ಷೆಗಿಂತ ಯಶಸ್ಸು ಕಂಡಿತು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶಿಕ್ಷಕಿ ಸುಮಂಗಲಾ ಭಟ್ಟ, ಶಾಂಕರ ಸ್ತೋತ್ರ, ಭಜನೆ, ಭಕ್ತಿಗೀತೆ, ಮೌಲ್ಯಶಿಕ್ಷಣ, ಭಗವದ್ಗೀತೆಗಳ ಪಾಠ ಮಾಡಿದರು.
ರಾಜಶೇಖರ ಧೂಳಿ ರಾಮಾಯಣ ಕಥೆ, ಈಶ್ವರದಾಸರು ಮಹಾಭಾರತ ಕಥೆ, ಸಂಗೀತಾ ಆಚಾರಿ ಮಣ್ಣಿನ ಮಾದರಿ, ಅನಿತಾ ಯಲ್ಲಾರಗದ್ದೆ ರಂಗೋಲಿ, ವಿದ್ವಾನ್ ಗಣಪತಿ ಭಟ್ಟ ಕೋಲಿಬೇಣ ಷೋಡಶ ಸಂಸ್ಕಾರ, ಶ್ರೀನಿವಾಸ ಗುಮ್ಮಾನಿ ವೇದ ಗಣಿತ, ಶ್ರೀಧರ ಭಟ್ಟ ಮೋಜಿನ ಗಣಿತ, ಸತೀಶ ಯಲ್ಲಾಪುರ ಚಿತ್ರಕಲೆ, ಗಣಪತಿ ಮೆಣಸುಮನೆ ಪುರಾಣ ಕಥೆ, ಮಹಾಲಕ್ಷ್ಮಿ ಕೊಂಬೆ ಮುದ್ರೆಗಳ ಮಹತ್ವದ ಕುರಿತು ವಿವರವಾಗಿ ತಿಳಿಸಿಕೊಟ್ಟರು.
ಚಂದ್ರಶೇಖರ ಭಟ್ಟ ಹುತ್ಕಂಡ ಹಾಗೂ ವಿಶ್ವನಾಥ ಕೊಂಬೆ ಯೋಗ, ಪ್ರಾಣಾಯಾಮ, ಮುದ್ರೆಗಳ ಬಗ್ಗೆ ತಿಳಿಸಿ ಕರಕುಶಲ ವಸ್ತು ತಯಾರಿಕೆ ಮಾಡುವುದನ್ನು ಹೇಳಿಕೊಟ್ಟರು.
ಸ್ಥಳೀಯ ಹಿರಿಯ ದಂಪತಿಗಳು ಆಗಮಿಸಿ ಜೀವನದ ಅನುಭವಗಳನ್ನು ಹಂಚಿಕೊಂಡು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.
ಅನಂತ ಅಬ್ಬಿ, ಸುಬ್ಬಣ್ಣ ಮೆಣಸುಪಾಲ, ಶ್ರೀಪಾದ ಮೆಣಸುಮನೆ, ಲಾಲಗುಳಿ ಶ್ರೀರಾಮ ಇತರರು ವಿವಿಧ ದೇಶೀಯ ಆಟಗಳನ್ನು ಮಕ್ಕಳಿಗೆ ಕಲಿಸಿದರು.
ಮಕ್ಕಳಿಂದ ಯಾವುದೇ ದೇಣಿಗೆ ಪಡೆಯದೇ ಊಟ, ತಿಂಡಿ, ಪಾನೀಯಗಳ ಜತೆಗೆ, ಲೇಖನ ಸಾಮಗ್ರಿ, ಕರಕುಶಲ ವಸ್ತು ತಯಾರಿಕೆಗೆ ಬೇಕಾದ ಸಾಮಗ್ರಿಗಳನ್ನೂ ಹಸರಪಾಲ ಕುಟುಂಬದವರೇ ಉಚಿತವಾಗಿ ನೀಡಿದರು.
ಟಿಎಂಎಸ್ ಅಧ್ಯಕ್ಷರಾಗಿರುವ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಗ್ರಾಮಸ್ಥರಾದ ಮಾಚಣ್ಣ ಮೆಣಸುಪಾಲ, ಮಂಜುನಾಥ ಹೆಗಡೆ ಕನ್ನಡಗಲ್ ಇತರರು ಸಹಕರಿಸಿದರು.
ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ದತ್ತಣ್ಣ ಶೇವ್ಕಾರ, ಸನಾತನ ಸಂಸ್ಕೃತಿ ಬಗ್ಗೆ ಬೌದ್ಧಿಕ ನಡೆಸಿಕೊಟ್ಟರು.
ಮಕ್ಕಳ ಬೇಸಿಗೆ ರಜೆಯ ಸಮಯ ವ್ಯರ್ಥವಾಗಿ ಕಳೆದು ಹೋಗಬಾರದು. ಮರೆಯಾಗುತ್ತಿರುವ ನಮ್ಮ ಸಂಸ್ಕೃತಿ, ಸಂಪ್ರದಾಯದ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿ ಸುಸಂಸ್ಕೃತರನ್ನಾಗಿಸಲು ನಮ್ಮಿಂದ ಏನಾದರೂ ಕೊಡುಗೆ ಸಲ್ಲಿಸಬೇಕೆಂಬ ಉದ್ದೇಶದಿಂದ ಶಿಬಿರ ಆಯೋಜಿಸಿದ್ದೆವು. ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿರುವುದು ಸಂತಸ ತಂದಿದೆ.- ರೂಪಾ ಹಾಗೂ ಮಹೇಶ ಭಟ್ಟ ಹಸರಪಾಲ ಶಿಬಿರದ ಆಯೋಜಕರು ಈ ಶಿಬಿರದಲ್ಲಿ ಭಾಗವಹಿಸಿ, ಶಾಂಕರ ಸ್ತೋತ್ರ, ಭಜನೆ, ಭಗವದ್ಗೀತೆ, ವಿವಿಧ ಕೌಶಲಗಳನ್ನು ರೂಢಿಸಿಕೊಂಡಿದ್ದೇವೆ. ರಜಾ ಅವಧಿಯನ್ನು ಸಾರ್ಥಕವಾಗಿ ಕಳೆದಿದ್ದೇವೆ.ಶ್ರೀಯಾ ಭಟ್ಟ, ಶಿಬಿರಾರ್ಥಿ