

ಶಿಡ್ಲಘಟ್ಟ: ಪಕ್ಷದಲ್ಲೇ ಇದ್ದುಕೊಂಡು ಬಣಗಳ ಗೊಂದಲ ಸೃಷ್ಟಿಸುತ್ತಿರುವ ಪಕ್ಷ ವಿರೋಧಿಗಳಿಗೆ ಮುಂದಿನ ದಿನಗಳಲ್ಲಿ ಹೈಕಮಾಂಡ್ ತಕ್ಕಪಾಠ ಕಲಿಸಲಿದೆ ಎಂದು ಕೆಪಿಸಿಸಿ ಸಂಯೋಜಕ ರಾಜೀವ್‌ಗೌಡ ಹೇಳಿದರು.
ಮುಂಬರುವ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಸಂಬಂಧ ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಪಕ್ಷದ ಸಂಘಟನೆ, ಸ್ಥಿತಿಗತಿ, ಪಕ್ಷ ವಿರೋಧಿ ಚಟುವಟಿಕೆ, ಪಕ್ಷ ಸಂಘಟನೆಗೆ ಕೈಗೊಳ್ಳುತ್ತಿರುವ ಕ್ರಮಗಳು, ಚಟುವಟಿಕೆಗಳ ಬಗ್ಗೆ ವಿಸ್ತೃತ ವರದಿಯನ್ನು ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಹೈಕಮಾಂಡ್‌ಗೆ ನೀಡಿದ್ದಾರೆ. ಎಲ್ಲವನ್ನೂ ಗಮನಿಸುತ್ತಿರುವ ವರಿಷ್ಠರು ಸಧ್ಯದಲ್ಲೇ ವಿರೋಧಿಗಳನ್ನು ಪಕ್ಷದಿಂದ ಹೊರ ಹಾಕಲಿದ್ದಾರೆ ಎಂದರು.
ಕಳೆದ ವಿಧಾನಸಭೆ ಚುನಾವಣೆ ನಂತರ ಕ್ಷೇತ್ರದಲ್ಲಿ ನಡೆದ ಗ್ರಾಪಂ, ಪಿಎಲ್‌ಡಿ ಬ್ಯಾಂಕ್, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವುದಕ್ಕೆ ಪಕ್ಷದ್ರೋಹಿಗಳೇ ಕಾರಣ. ಪಕ್ಷ ತಾಯಿ ಇದ್ದಂತೆ, ತಾಯಿಗೆ ದ್ರೋಹ ಮಾಡುವುದು ಬೇಡ. ಪಕ್ಷದಲ್ಲಿ ಇರಲು ಆಗದಿದ್ದರೆ ನೀವಾಗಿಯೇ ಹೊರ ಹೋಗಿ. ಆದರೆ, ಪಕ್ಷದಲ್ಲಿದ್ದುಕೊಂಡು ಸ್ವಪಕ್ಷೀಯರ ಸೋಲಿಗೆ, ಪಕ್ಷದ ಹಿನ್ನಡೆಗೆ ಕಾರಣರಾಗಬೇಡಿ ಎಂದರು.
ಮುಂದಿನ ಎರಡು ತಿಂಗಳಲ್ಲಿ ಯಾವಾಗ ಬೇಕಾದರೂ ತಾಪಂ, ಜಿಪಂ ಚುನಾವಣೆಗಳು ಘೋಷಣೆ ಆಗಬಹುದು. ನಂತರ ಗ್ರಾಪಂ, ನಗರಸಭೆ ಚುನಾವಣೆಗಳು ಒಂದರ ನಂತರ ಒಂದರಂತೆ ಎದುರಾಗುತ್ತವೆ. ಕಳೆದ ವಿಧಾನಸಭೆ ಚುನಾವಣೆ ಸೋಲಿನಿಂದ ಕೆಂಗೆಟ್ಟಿಲ್ಲ. ಆತ್ಮಸ್ಥೈರ್ಯವನ್ನೂ ಕಳೆದುಕೊಂಡಿಲ್ಲ. ವಿರೋಧ ಪಕ್ಷಗಳಿಗೂ ಹೆದರುವವನಲ್ಲ. ಸೋಲಿನ ನಂತರ ಗಂಟುಮೂಟೆ ಕಟ್ಟಿಕೊಂಡು ಹೋಗುತ್ತಾರೆ ಎಂದೆಲ್ಲಾ ಕುಹಕವಾಡಿದ್ದರು. ಆದರೆ, ಸೋತ ದಿನವೇ ಇದೇ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘೋಷಣೆ ಮಾಡಿದಂತೆ ಈ ಕ್ಷೇತ್ರದಲ್ಲೇ ಉಳಿದುಕೊಂಡಿದ್ದೇನೆ ಎಂದರು.
ಮುಂಬರುವ ಎಲ್ಲ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯಿದೆ. ಹೈಕಮಾಂಡ್ ನನ್ನ ಬೆನ್ನಿಗಿದೆ. ನೀವೆಲ್ಲರೂ ನನ್ನೊಂದಿಗೆ ಪ್ರಾಮಾಣಿಕವಾಗಿರಿ, ತಾಯಿಯಂತಿರುವ ಪಕ್ಷವನ್ನು ಗೆಲ್ಲಿಸೋಣ. ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಧ್ವಜ ಹಾರಾಡಿಸೋಣ ಎಂದರು.
ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್‌ಗೌಡ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಮುಖಂಡರಾದ ಎನ್.ಮುನಿಯಪ್ಪ, ಡಿ.ಪಿ.ನಾಗರಾಜ್, ತಿಮ್ಮನಾಯಕನಹಳ್ಳಿ ಆನಂದ್, ಬೈರೇಗೌಡ, ಹಿರೇಬಲ್ಲ ರವಿಕುಮಾರ್, ಅಪ್ಸರ್‌ಪಾಷಾ ಇತರರಿದ್ದರು.