ಬಿಡದಿ: ಸಮೀಪದ ಕೊಡಿಯಾಲ ಗ್ರಾಮದದಲ್ಲಿ ಶನಿವಾರ ರಾತ್ರಿ ಮನೆಮುಂದೆ ಮಲಗಿದ್ದ ನಾಯಿಯನ್ನು ಚಿರತೆ ಹೊತ್ಯೊಯ್ದಿದೆ.
ಗ್ರಾಮದ ದೊಡ್ಡ ಹನುಮಂತಯ್ಯ ಅವರ ಮನೆಯ ಕಾಂಪೌಂಡ್ ಒಳಗೆ ನಾಯಿ ಇತ್ತು. ಭಾನುವಾರ ಬೆಳಗ್ಗೆ ನಾಯಿ ಎಲ್ಲಿಯೂ ಕಾಣಲಿಲ್ಲ. ಹುಡುಕಾಟ ನಡೆಸಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ದು, ಬಳಿಕ ಮನೆಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಬಾಗಿಲಿನಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದ ದೃಶ್ಯ ಸೆರೆಯಾಗಿದೆ.
ಕಳೆದೊಂದು ವಾರದಿಂದ ಗ್ರಾಮದಲ್ಲಿ ಚಿರತೆ ಓಡಾಟ ನಡೆಸಿದ್ದಲ್ಲದೇ ಕೆಲ ಬೀದಿ ನಾಯಿಗಳನ್ನು ಹೊತ್ತೊಯ್ದ ಮಾತು ಕೇಳಿಬಂದಿದ್ದರೂ ಇದೀಗ ಚಿರತೆ ಬಂದಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ದೃಢಪಟ್ಟಿದೆ. ಗ್ರಾಮದಲ್ಲಿ ಚಿರತೆ ಸಂಚಾರ ಎಲ್ಲರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಬೋನು ಇರಿಸಿ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಸಿದ್ದಾರೆ.